ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ
ಬಂಟ್ವಾಳ: ಕರ್ನಾಟಕದ ನೆಲ, ಜಲ ಸಂರಕ್ಷಣೆಗೆ ಹಾಗೂ ನಾಡ ಭಾಷೆಯ ಉಳಿವಿಗೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹೇಳಿದ್ದಾರೆ.

ಬುಧವಾರ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗ ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ ಎಂದು ಸಾಹಿತಿಗಳು, ದಾರ್ಶನಿಕರು ಪ್ರಸ್ತಾಪಿಸುತ್ತಿರುವುದನ್ನು ನೆನಪಿಸಿದ ತಹಸೀಲ್ದಾರ್, ಕನ್ನಡನಾಡು ಮತ್ತು ಭಾಷೆಯ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಸಿದ್ಧರಾಗಬೇಕು. ವಿವಿಧ ರಂಗಗಳಲ್ಲಿ ತೊಡಗಿಸಿ ರಾಜ್ಯದ ಪತಾಕೆಯನ್ನು ವಿಶ್ವ ಭೂಪಟದಲ್ಲಿ ತೋರಿಸಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗೋಪಾಲಕೃಷ್ಣ ನೇರಳೆಕಟ್ಟೆ, ಭಾಷೆಯನ್ನು ಮಾತನಾಡುವ ಶೈಲಿ ಬೇರೆ ಇರಬಹುದು. ಆದರೆ ಕರ್ನಾಟಕದಲ್ಲಿ ಕನ್ನಡದ ವಚನಕಾರರಿಂದ ತೊಡಗಿ ಸ್ವಾತಂತ್ರ್ಯ ಹೋರಾಟಗಾರರವರೆಗೆ, ಸಾಹಿತ್ಯದಿಂದ ತಂತ್ರಜ್ಞಾನದವರೆಗೆ ಕರ್ನಾಟಕ ಜಗತ್ತಿನ ಗಮನ ಸೆಳೆದಿದೆ ಎಂದರು.

ಕನ್ನಡ ಸಂಸ್ಕಾರ ನೀಡುವ ಕೆಲಸ ಆಗಬೇಕು. ನಾಡಪ್ರೇಮ ನಮಗಿರಬೇಕು. ಭಾಷಾಭಿಮಾನ ಇರಬೇಕು, ಅನ್ಯಭಾಷೆ ಕಲಿಕಾ ವ್ಯಾಮೋಹವನ್ನು ನಾವೇ ಬೆಳೆಸಿಕೊಂಡರೆ, ಮಕ್ಕಳು ಹೇಗೆ ಅಭಿಮಾನ ಪಡೆದುಕೊಳ್ಳುವುದು ಎಂದರು.
ತಾಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಬಂಟ್ವಾಳ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಸ್ವಾಗತಿಸಿದರು. ಹಿರಿಯ ಕಲಾವಿದ ಮಂಜು ವಿಟ್ಲ ಅವರಿಗೆ ನುಡಿ ನಮನವನ್ನು ತಾಲೂಕು ಕಚೇರಿ ಸಿಬ್ಬಂದಿ ಶ್ರೀಕಲಾ ಕಾರಂತ ಸಲ್ಲಿಸಿದರು.
ಉಪ ತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿದರು, ಪೊಲೀಸ್, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಬಿ.ಮೂಡ ಹೈಸ್ಕೂಲ್, ಎಸ್.ಎಲ್.ಎನ್.ಪಿ. ವಿದ್ಯಾಲಯ ಸಹಿತ ನಾನಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಎಸ್.ವಿ.ಎಸ್.ದೇವಳ ಶಾಲೆ ವಿದ್ಯಾರ್ಥಿಗಳು ಕನ್ನಡ ಗೀತೆ ಹಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.