ಕಲ್ಲಡ್ಕ ಶ್ರೀರಾಮದಲ್ಲಿ ಕನ್ನಡ ರಾಜ್ಯೋತ್ಸವ, ಸಾಮೂಹಿಕ ಹುಟ್ಟುಹಬ್ಬ ಆಚರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೫೦ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ನವೆಂಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ, ಭಜನೆಯೊಂದಿಗೆ ಆಚರಿಸಲಾಯಿತು.

ಶ್ರೀರಾಮ ಪ್ರೌಢಶಾಲೆಯ ಕಲಾ ಅಧ್ಯಾಪಕ ಜಿನ್ನಪ್ಪ ಅವರು ಮಾತನಾಡಿ, ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು, ತಾಯಿ ಭುವನೇಶ್ವರಿ ನಾಡು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ಹಚ್ಚ ಹಸುರಿನ ಸುಂದರ ಬೆಟ್ಟ ಗುಡ್ಡಗಳು, ಹರಿಯುವ ನದಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟವಾಗಿದೆ ಎಂದರು.

ಕನ್ನಡ ಶಾಲೆಯಲ್ಲಿ ಈ ಹಬ್ಬವನ್ನು ಅಭಿಮಾನ ಹಾಗೂ ಹಕ್ಕಿನಿಂದ ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ. ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು.
ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಿತ್ಯ ಕನ್ನಡದಲ್ಲೇ ವ್ಯವಹರಿಸುವುದಲ್ಲದೆ ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ದರಾಗೋಣ ಎಂದರು.

ಕಾರ್ಯಕ್ರಮದಲ್ಲಿ ಸಾವಿರ ವಿದ್ಯಾರ್ಥಿಗಳು ನಮ್ಮ ನಾಡಗೀತೆ, “ಜಯ ಭಾರತ ಜನನೀಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆಯನ್ನು ಹಾಡಿದರು. ನಂತರ ೩ ಮತ್ತು ೪ನೇ ತರಗತಿಯ ವಿದ್ಯಾರ್ಥಿಗಳಿಂದ ‘ಜೋಗದ ಸಿರಿ ಬೆಳಕಿನಲ್ಲಿ’ ಗೀತ ಗಾಯನ ನಡೆಯಿತು.

ನಂತರ ಹುಟ್ಟುಹಬ್ಬ ಆಚರಿಸುವ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ, ತಿಲಕ ಧಾರಣೆ ಮಾಡಿ, ಸಿಹಿ ನೀಡಿದರು. ವಿದ್ಯಾರ್ಥಿಗಳು ನಿಧಿ ಸಮರ್ಪಣೆ ಮಾಡಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೇಯಾ ಎಂ.ಜೆ ಸ್ವಾಗತಿಸಿ, ಆದಿತ್ಯ ನಿರೂಪಿಸಿ, ಬಿನಿತ್ ವಂದಿಸಿದರು.