ಬಂಟ್ವಾಳ ಕಸಾಪದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ
ಬಂಟ್ವಾಳ: ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನೆಲ ಜಲ ಸಂಸ್ಕೃತಿಯ ಅಳಿವು ಉಳಿವಿನ ಬಗೆಗೆ ಚಿಂತಿಸಬೇಕಾಗಿದೆ ಎಂಬುದಾಗಿ ಕಸಾಪ ಬಂಟ್ವಾಳ ಘಟಕದ ಗೌರವ ಸಲಹೆಗಾರ ಶಿವಶಂಕರ್ ಎನ್ ಹೇಳಿದರು.
ಅವರು ಬಂಟ್ವಾಳ ಕನ್ನಡ ಭವನದ ಆವರಣದಲ್ಲಿ ಕಸಾಪ ಬಂಟ್ವಾಳ ತಾಲೂಕು ಘಟಕ ಏರ್ಪಡಿಸಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವದಲ್ಲಿ ಸಂದೇಶ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ರವೀಂದ್ರ ಕುಕ್ಕಾಜೆ ಮಾತನಾಡಿ ಕನ್ನಡದ ಕೆಲಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿರಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಧ್ವಜಾರೋಹಣ ಗೈದು ಸಭಾಧ್ಯಕ್ಷತೆ ವಹಿಸಿದ್ದರು.
ಕಸಾಪ ಗೌರವ ಸಲಹೆಗಾರ ಉಮೇಶ್ ಕುಮಾರ್ ವೈ, ಪಾಣೆಮಂಗಳೂರು ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್, ಸಾಯಿರಾಂ ಜೆ ನಾಯಕ್, ಸುಭಾಶ್ ಚಂದ್ರ ಜೈನ್, ಸಲೀಂ ಬೋಳಂಗಡಿ, ಲತೀಫ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ ಸ್ವಾಗತಿಸಿ, ನಿರೂಪಿಸಿದರು. ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್ ವಂದಿಸಿದರು.