ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ದ 113 ನೇ ನೂತನ ಮಾಣಿ ಶಾಖೆಯ ಶುಭಾರಂಭ
ಬಂಟ್ವಾಳ: ಸಾಲ ದೊರೆಯದೆ ಅಥವಾ ಸಾಲ ತೀರಿಸಲಾಗದೇ ರೈತ ಸಾವನ್ನಪ್ಪಿದ ಒಂದೇ ಒಂದು ಉದಾಹರಣೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ, ಸಂಸ್ಥೆ ಬರುವ ಸಂದರ್ಭದಲ್ಲಿ ಸ್ವಾಗತಿಸುವ ಮನೋಭಾವ ಸಹಕಾರಿಗಳದ್ದಾಗಿದ್ದು, ಎಲ್ಲರನ್ನು ಸೇರಿಸಿಕೊಂಡು ಸವಲತ್ತುಗಳು ಜನರಿಗೆ ತಲುಪುವ ರೀತಿಯಲ್ಲಿ ಸಹಕಾರಿ ಕ್ಷೇತ್ರ ಕೆಲಸಗಳನ್ನು ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ “ಸಹಕಾರ ರತ್ನ” ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಮಾಣಿ ಶ್ರೀಲಕ್ಷ್ಮೀನಾರಾಯಣ ಕಾಂಪ್ಲಕ್ಸ್ ನ ಪ್ರಥಮ ಅಂತಸ್ತುವಿನಲ್ಲಿ ಮಂಗಳವಾರ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ದ 113 ನೇ ನೂತನ ಮಾಣಿ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಲ ಮರುಪಾವತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿ ಎಂದು ಹೇಳಿದರು.
22 ಕೋ.ಠೇವಣಿ
ಮಾಣಿ ಪ್ರದೇಶದಲ್ಲಿ ಜನರು ೨೨ಕೋಟಿಯ ಠೇವಣಿಯನ್ನು ನೀಡಿ, ೧೩೦೦ಕ್ಕೂ ಅಧಿಕ ಖಾತೆಯನ್ನು ತೆರೆದು ಉತ್ತಮ ಸ್ಪಂದನೆಯನ್ನು ನೀಡಿದ್ದಾರೆ. ಇದು ಯಶಸ್ಸಿನ ಮುನ್ಸೂಚನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನವೋದಯ ಸ್ವಸಹಾಯ ಸಂಘಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳು ಅವಿಭಜಿತ ದ.ಕ.ಜಿಲ್ಲೆಯಲ್ಲೆ ಹುಟ್ಟಿದರೂ ಇದೀಗ ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲಯನ, ಸರಳವಲ್ಲದ ವ್ಯವಹಾರ ನಿಯಮ, ಭಾಷೆ ತೊಡಕುಗಳಿಂದಾಗಿ ಜನ ಸಹಕಾರಿ ಸಂಘಗಳತ್ತ ಒಲವು ಹರಿಸಿದ್ದಾರೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ: ರೈ
ನೂತನ ಮಾಣಿ ಶಾಖೆಯನ್ನು ಉದ್ಘಾಟಿಸಿ ಹಾಗೂ ಲಾಕರ್ ಕೀಯನ್ನು ಹಸ್ತಾಂತರಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮೈಸೂರು ಹಾಗೂ ಬೆಂಗಳೂರಿಗೆ ಹೋಗುವ ಮಾರ್ಗದ ಸಂಗಮ ಪ್ರದೇಶವಾದ ಮಾಣಿ ತಾಲೂಕಿನಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದಾಗ ಸಹಕಾರಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತದೆ.
ಕೃಷಿಕರ ಅಭ್ಯುದಯಕ್ಕಾಗಿ ಸ್ಥಾಪನೆಯಾದ ಸಹಕಾರಿಗಳು ಸಾಲವನ್ನು ನೀಡಲು ಅರ್ಹತೆಯನ್ನು ಪಡೆಯಬೇಕು. ಕೇಂದ್ರ ಸಹಕಾರಿ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ಕಪ್ಪು ಚುಕ್ಕೆ ಇಲ್ಲದೆ ವ್ಯವಹಾರ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗಣಕೀರಣದ ಉದ್ಘಾಟನೆಯನ್ನು ನೆರವೇರಿಸಿ ಹಾಗೂ ಠೇವಣಿ ಪತ್ರವನ್ನು ವಿತರಿಸಿ ಮಾತನಾಡಿ, ಮಹಿಳೆಯರ ಕೈ ಗಟ್ಟಿಯಾದಾಗ ಕುಟುಂಬದ ಅಡಿಪಾಯ ಗಟ್ಟಿಯಾಗುತ್ತದೆ.ಕೃಷಿ ಮಾಡಿದ ಜಾಗವನ್ನು ಅಕ್ರಮ ಸಕ್ರಮ ಮೂಲಕ ಪಡೆಯಲು ಎಲ್ಲಿಂದಲೋ ಬಂದ ಅಧಿಕಾರಿಗಳು ಸಮಸ್ಯೆಯಾಗಿ ಪರಿಣಮಿಸುತ್ತಿದ್ದಾರೆ.
ರಾಜೇಂದ್ರ ಕುಮಾರ್ ಅವರ ನೇತೃತ್ವದ ಕೇಂದ್ರ ಸಹಕಾರಿ ಬ್ಯಾಂಕ್ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ವ್ಯವಹಾರ ನಡೆಸುತ್ತಿದೆ ಎಂದು ಇ.ಡಿ. ಅಧಿಕಾರಿಗಳು ಪ್ರಶಂಸಿದ್ದಾರೆ. ಸರಕಾರಿ ಮತ್ತು ಸಹಕಾರಿ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಕಡೆ ಸಾಗೋಣ ಎಂದರು.
ಸಾಲ ಪತ್ರಗಳನ್ನು ಸದಸ್ಯರಿಗೆ ವಿತರಿಸಿದ ಮಾಣಿ ಗ್ರಾ. ಪಂ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ ಅವರು ಮಾತನಾಡಿ, ಎಸ್ ಸಿಡಿಸಿಸಿ ಬ್ಯಾಂಕ್ ನ ಮಾಣಿ ಶಾಖೆ ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಗೆ ಮಾದರಿ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನೇರಳಕಟ್ಟೆ ಸರಕಾರಿ ವ್ಯವಸಾಯಿಕ ಸಂಘ ನಿ. ಅಧ್ಯಕ್ಷ ಪುಷ್ಟರಾಜ ಚೌಟ ಭದ್ರತಾ ಕೋಶ ಉದ್ಘಾಟಿಸಿದರು. ಶಾಖಾ ಕಟ್ಟಡ ಮಾಲಕ ಎಮ್. ನಾರಾಯಣ ಪೈ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು ಜಯರಾಮ ರೈ, ಹರಿಶ್ಚಂದ್ರ ಕೆ. ಮಾಣಿ,ಶಾಖಾ ವ್ಯವಸ್ಥಾಪಕಿ ವತ್ಸಲಾ, ಬ್ಯಾಂಕಿನ ಸಿಬ್ಬಂದಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.
ನವೋದಯ ಸ್ವಸಹಾಯ ಗುಂಪಿನ ಸದಸ್ಯರು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರುಗಳು ಹಾಜರಿದ್ದರು.
ಇದೇ ವೇಳೆ “ಸಹಕಾರ ರತ್ನ” ಡಾ. ಎಂ ಎನ್. ರಾಜೇಂದ್ರ ಕುಮಾರ್ ಅವರನ್ನು ಸಾಧನೆಗಾಗಿ ವಿಶೇಷವಾಗಿ ಗೌರವಿಸಲಾಯಿತು. ಹಾಗೆಯೇ ಶಾಖಾ ಕಟ್ಟಡದ ಮಾಲಕ ಎಮ್.ನಾರಾಯಣ ಪೈ, ನೇರಳಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಸಹಕಾರಿ ಕ್ರೀಡಾಕೂಟದ ಉಸ್ತುವಾರಿ ದಯಾನಂದ ರೈ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದವರನ್ನು ಹಾಗೂ ಸಹಕಾರ ನೀಡಿದವರು, ಮೇಲ್ವಿಚಾರಕರನ್ನು ಗೌರವಿಸಲಾಯಿತು.
“ಅದೃಷ್ಟ ವಂತರು“
ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಅದೃಷ್ಟ ಚೀಟಿಯಲ್ಲಿ ಕೆದಿಲ ಗ್ರಾಮದ ಮೀನಾಕ್ಷಿ ಎಂ.ನಾಲ್ಕು ಗ್ರಾಂ ಚಿನ್ನದೊಂದಿಗೆ ಮೊದಲ ಸ್ಥಾನ ಪಡೆದರು.
ಬಿಳಿಯೂರು ಗ್ರಾಮದ ಪುಷ್ಪಾನಂದ ಎರಡು ಗ್ರಾಮ್ ಚಿನ್ನದ ಜತೆ ದ್ವಿತೀಯ ಸ್ಥಾನ ಪಡೆದರು.
ಠೇವಣಿ ಇಟ್ಟವರಲ್ಲಿ ಅದೃಷ್ಟ ವಂತರಾಗಿ ಬೆಳ್ಳಿಪಾಡಿಯ ಹೇಮಾವತಿ ನಾಲ್ಕು ಗ್ರಾಂ ಚಿನ್ನದ ಜತೆ ಪ್ರಥಮ ಹಾಗೂ ವಿಠಲಕೋಡಿಯ
ಪದ್ಮನಾಭ ಪೂಜಾರಿ ಎರಡು ಗ್ರಾಂ ಚಿನ್ನ ದೊಂದಿಗೆ ದ್ವಿತೀಯ ಸ್ಥಾನ ಪಡೆದರು.
ಜಗತ್ ಪ್ರಾರ್ಥಿಸಿದರು. ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿದರು. ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಆರ್ .ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ನ.30 : ಕ್ರೀಡಾಕೂಟ
ನವೆಂಬರ್ 30 ರಂದು ಸಹಕಾರಿ ಸಂಘಗಳು ಸದಸ್ಯರಿಗೆ ಪುತ್ತೂರಿನಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಸಹಿತ ಸಹಕಾರಿಗಳೆಲ್ಲರೂ ಭಾಗವಹಿಸುವಂತೆ ಡಾ.ಎಂ.ಎನ್.ಆರ್.ಕರೆ ನೀಡಿದರು.