Published On: Thu, Oct 5th, 2023

ಭರದಿಂದ ಸಾಗಿದೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ,ಸುಮಾರು ೭ ಕೋ.ರೂ.ವೆಚ್ಚದ ಯೋಜನೆ,ಜ. ೧೭ ರಿಂದ ೨೫ರವರೆಗೆ ಬ್ರಹ್ಮಕಲಶಕ್ಕೆ ಸಿದ್ಧತೆ

ಬಂಟ್ವಾಳ: ನೇತ್ರಾವತಿ ಕಿನಾರೆಯಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸುಮಾರು ೭ ಕೋ.ರೂ.ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ.ಈಗಾಗಲೇ ಪ್ರಧಾನ ಗರ್ಭಗುಡಿ,ತೀರ್ಥಮಂಟಪದ ಮೇಲ್ಛಾವಣಿಗೆ ತಾಮ್ರದ ಹೊದಿಕೆಯ ಕಾರ್ಯ ಪೂರ್ಣಗೊಂಡಿದ್ದು, ೨೦೨೪ರ ಜ. ೧೭ರಿಂದ ೨೫ರವರೆಗೆ ಕ್ಷೇತ್ರದ ಬ್ರಹ್ಮಕಲಶೋತ್ಸವ ನೆರವೇರಲಿದೆ.

ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಆಗಮ ಶಾಸ್ತ್ರಕ್ಕೆ ಪೂರಕವಾಗಿ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಸುಮಾರು ೨.೫ ಕೋ.ರೂ.ಗಳ ಕಾಮಗಾರಿಗಳು ಪೂರ್ಣಗೊಂಡಿದೆ.ಸುತ್ತಪೌಳಿಯ ಶಿಲಾಮಯ ಗೋಡೆಗಳು ಬಹುತೇಕ ಪೂರ್ಣಗೊಂಡಿದ್ದು,ಮೇಲ್ಛಾವಣಿಯ ದಾರುಶಿಲ್ಪದ ಕಾರ್ಯ ಪ್ರಗತಿಯಲ್ಲಿದೆ.

ಧ್ವಜಸ್ತಂಭದ ತೈಲಾಧಿವಾಸ ನಡೆಯುತ್ತಿದ್ದು,ಪ್ರಸ್ತುತ ಪ್ರತಿನಿತ್ಯವೂ ಭಕ್ತರು ಎಳ್ಳೆಣ್ಣೆ ಸಮರ್ಪಿಸುತ್ತಿದ್ದಾರೆ.ಪ್ರಧಾನ ಗರ್ಭಗುಡಿಯ ಮೇಲ್ಛಾವಣಿಗೆ ತಾಮ್ರದ ಹೊದಿಕೆಗೆ ಪ್ರತಿ ಮನೆಯ ಭಕ್ತರ ಸೇವೆ ಸಂದಾಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕೂಪನ್‌ಗಳನ್ನು ನೀಡಲಾಗಿದ್ದು,ಜತೆಗೆ ಸ್ವರ್ಣ ಲೇಪಿತ ಪ್ರಧಾನ ಕಲಶಕ್ಕೂ ಪ್ರತಿ ಭಕ್ತರ ಸೇವೆಯ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಪ್ರತ್ಯೇಕ ಕಾಣಿಕೆ ಡಬ್ಬಿಯನ್ನಿಟ್ಟು ಭಕ್ತರ ಇಚ್ಛಾನುಸಾರ ಕಾಣಿಕೆ ನೀಡಲು ಜೀರ್ಣೋದ್ಧಾರ ಸಮಿತಿ ಅವಕಾಶ ಕಲ್ಪಿಸಿದೆ.

ಮುಂದಿನ ದಿನಗಳಲ್ಲಿ ಹನುಮಂತ ದೇವರ ಗುಡಿ,ನಾಗದೇವರ ಬನ,ಪರಿವಾರ ದೈವಗಳ ಗುಡಿಗಳು,ವಸಂತ ಮಂಟಪ ಮೊದಲಾದ ಕಾಮಗಾರಿಗಳು ಶೀಘ್ರ ಪ್ರಾರಂಭಗೊಳ್ಳಲಿದೆ.

ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಅವರ ನೇತೃತ್ವದಲ್ಲಿ ವಾಸುಶಿಲ್ಪದ ಕೆಲಸಗಳು ನಡೆಯುತ್ತಿದ್ದು,ಸಂಸದರು,ಶಾಸಕರು,ಮಾಜಿ ಸಚಿವರು,ಹಲ್ಸನಾಡು ಮನೆತನದ ಧನಿಗಳ ಗೌರವಾಧ್ಯಕ್ಷೆಯ ಜೀರ್ಣೋದ್ಧಾರ ಸಮಿತಿಯಲ್ಲಿ ಡಾ.ಎಂ.ಮೋಹನ್ ಆಳ್ವ ಸಂಚಾಲಕರಾಗಿ,ಎಂ.ಎಸ್.ಶೆಟ್ಟಿ ಸರಪಾಡಿ ಅಧ್ಯಕ್ಷರಾಗಿ,ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ ಕರ‍್ಯಾಧ್ಯಕ್ಷರಾಗಿ ಇತರ ಪದಾಧಿಕಾರಿಗಳು,ಸದಸ್ಯರ ತಂಡ ಜೀರ್ಣೋದ್ಧಾರ ಕಾರ್ಯದ ಯಶಸ್ಸಿನಲ್ಲಿ ಶ್ರಮಿಸುತ್ತಿದೆ.

ಒಂದೆಡೆ ಶಿಲಾಮಯ ದೇವಾಲಯ ನಿರ್ಮಾಣಕ್ಕಾಗಿ ಕಲ್ಲಿನ ಕೆಲಸಗಳು,ದಾರು ಶಿಲ್ಪದ ಕೆಲಸಗಳು ನಡೆಯುತ್ತಿದ್ದರೆ,ಮತ್ತೊಂದೆಡೆ ಪ್ರತಿನಿತ್ಯವೂ ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶ್ರಮದಾನ ಕಾರ್ಯ ನಡೆಯುತ್ತಿದೆ.ಹೆಚ್ಚಿನ ಕೆಲಸಗಳಿಗೆ ಭಕ್ತರ ಶ್ರಮದಾನ ಸಹಕಾರ ಲಭಿಸಿದ ಪರಿಣಾಮ ಜೀರ್ಣೋದ್ಧಾರ ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವುದಕ್ಕೆ ಸಹಕಾರಿಯಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter