ಕಾಲು ಕಳೆದುಕೊಂಡಿರುವ ಮನ್ಸ ಪೂಜಾರಿಗೆ ವಾಕರ್ ನೀಡಿದ ಪಡುಪೆರಾರ ಪಂಚಾಯತ್ ಸದಸ್ಯ
ಕೈಕಂಬ: ಕೆಲಸ ಮಾಡುತ್ತಿರುವಾಗ ಕಬ್ಬಿಣದ ಮೊಳೆ ತಾಗಿ ಉಂಟಾದ ನಂಜಿನಿಂದಾಗಿ ತನ್ನ ಬಲಕಾಲು ಕಳೆದುಕೊಂಡಿರುವ ಪಡುಪೆರಾರ ಗ್ರಾಮ ಪಂಚಾಯತ್‌ನ ಅಂಬಿಕಾನಗರದ ೨ನೇ ವಾರ್ಡ್ ಬಡ ಕುಟುಂಬದ ಮೀನ ಪೂಜಾರಿ ಯಾನೆ ಮನ್ಸ ಪೂಜಾರಿ(೭೦) ಎಂಬವರಿಗೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ,ಹಾಲಿ ಸದಸ್ಯ ನೂರ್ ಅಹ್ಮದ್ ಅವರು ವೈಯಕ್ತಿಕ ನೆಲೆಯಲ್ಲಿ ವಾಕರ್ ಹಾಗೂ ಬಟ್ಟೆಬರೆ ನೀಡಿ ಮುಂದಿನ ಚಿಕಿತ್ಸೆಗೆ ಕೈಲಾದ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.
ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಳೆದ ೧೧ ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ ಮನ್ಸ ಪೂಜಾರಿ ಅವರಿಗೆ ಇತ್ತೀಚೆಗೆ ಕೆಲಸದ ವೇಳೆ ಬಲಗಾಲಿಗೆ ಕಬ್ಬಿಣದ ಮೊಳೆ ತಾಗಿದ್ದು,ಅದು ನಂಜಾಗಿ ಪರಿಣಮಿಸಿದೆ.ನಂಜಿನಿಂದ ಊದಿಕೊಂಡಿರುವ ಬಲಕಾಲನ್ನು ಕತ್ತರಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಪತ್ನಿ ಸುಲೋಚನಾ ದುಃಖದಿಂದ ಹೇಳಿಕೊಂಡಿದ್ದಾರೆ.
ಪತ್ನಿಯೊಂದಿಗೆ ವಾಸಿಸುತ್ತಿರುವ ಮನ್ಸ ಪೂಜಾರಿಯವರು ಕಾಲುನೋವಿಂದ ನಡೆದಾಡಲು ಸಾಧ್ಯವಾಗದೆ ಪ್ಲಾಸ್ಟಿಕ್ ಕುರ್ಚಿ ಹಿಡಿದುಕೊಂಡು ಹೊರಗಡೆ ಬರುತ್ತಿದ್ದರು.ಇದನ್ನು ಗಮನಿಸಿದ ನೂರ್ ಅಹಮ್ಮದ್ ಅವರು ಸೆ.೬ರಂದು ಮನೆಗೆ ತೆರಳಿ ಮಾನವೀಯ ನೆಲೆಯಲ್ಲಿ ವಾಕರ್,ಲುಂಗಿ, ಶರ್ಟ್ ಹಾಗೂ ಒಂದಷ್ಟು ಆರ್ಥಿಕ ನೆರವು ನೀಡಿದ್ದಾರೆ.
ಕಷ್ಟದಲ್ಲಿರುವವರಿಗೆ ನೆರವು ನೀಡುತ್ತ ಬಂದಿರುವ ನೂರ್ ಅವರು ಪಡುಪೆರಾರ ಪಂಚಾಯತ್‌ನಲ್ಲಿ ಪ್ರಸಕ್ತ ೫ನೇ ಬಾರಿಗೆ ಸದಸ್ಯರಾಗಿದ್ದಾರೆ. ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು.ಮನ್ಸ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಶಂಕರ್ ಪಡುಪೆರಾರ,ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಯ ಡಿಎಚ್‌ಒ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕ ಹಾಗೂ ಸ್ಥಳೀಯ ನಿವಾಸಿ ರುದ್ರೇಶ್ ಬಿ. ತಿಮ್ಮಾಪುರ, ಮನ್ಸ ಪೂಜಾರಿಯವರ ಪತ್ನಿ ಸುಲೋಚನಾ ಉಪಸ್ಥಿತರಿದ್ದರು.