Published On: Mon, Aug 28th, 2023

ಬಂಟವಾಳ ಬಂಟರ ಸಂಘದಿಂದ 1,750 ವಿದ್ಯಾರ್ಥಿಗಳಿಗೆ 52 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಬಂಟರ ಸಂಘ ಬಂಟವಾಳ ಮತ್ತು ಮುಂಬೈಯ ಆಲ್ ಕಾರ್ಗೋಲಾಜೆಸ್ಟಿಕ್ಸ್ ಸಂಸ್ಥೆಯ ಅಧ್ಯಕ್ಷ ಶಶಿಕರಣ್ ಶೆಟ್ಟಿ ಅವರ ಸಹಯೋಗದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ  4 ನೇ ವರ್ಷದ ಬಂಟ್ವಾಳ  ತಾಲೂಕಿನ ಸರ್ವ ಸಮಾಜದ ಸುಮಾರು 1,750 ವಿದ್ಯಾರ್ಥಿಗಳಿಗೆ  52 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ರವಿವಾರ ಬ್ರಹ್ಮರಕೊಟ್ಲವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ನಡೆಯಿತು.

ಮುಂಬೈ ಬಂಟರ ಸಂಘದ ಅಧ್ಯಕ್ಷರಾದ  ಚಂದ್ರಹಾಸ ಕೆ. ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶಿಕ್ಷಣದಿಂದ ಮಾತ್ರ ಸಮಾಜದ ಬೆಳೆವಣಿಗೆ ಸಾಧ್ಯ,ಮುಂಬೈ ಬಂಟರ ಸಂಘ ವು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗಿ ದತ್ತು ಪಡೆಯುವುದು, ಬಡ್ಡಿರಹತ ಸಾಲ,ನೇರವಾಗಿ ವಿದ್ಯಾಸಂಸ್ಥೆಗೆ ಪೀಸ್ ಪಾವತಿ,ಶಿಕ್ಚಣ ಸಂಸ್ಥೆಗಳ ನಿರ್ಮಾಣ ಸಹಿತ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ.ಅದೇ ಮಾದರಿಯಲ್ಲಿಬಂಟ್ವಾಳ ಬಂಟರ ಸಂಘ ಕೂಡ ಸಾಮಾಜಿಕ,ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.


ದೇಶ ಕಟ್ಟಲು ಪೂರಕ: ಯು.ಟಿ.ಖಾದರ್
ಈ ಸಂದರ್ಭ ಕರ್ನಾಟಕ ವಿಧಾನಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಬಂಟರ ಸಂಘದ ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಖಾದರ್, ವಿದ್ಯಾರ್ಥಿವೇತನ ನೀಡುವ ಮೂಲಕ ಬಂಟರ ಸಂಘ ದೇಶ ಕಟ್ಟಲು ಪೂರಕವಾದ ಕೆಲಸ ಮಾಡುತ್ತಿದೆ, ದೇಶದಲ್ಲೇ ಉತ್ತಮ ಅವಕಾಶವನ್ನು ಪಡೆದುಕೊಂಡು ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡುವ ಕೆಲಸ ಯುವಕರ ಮೇಲಿದೆ. ಯುವಜನತೆ ರಾಜಕೀಯ ಕ್ಷೇತ್ರಕ್ಕೂ ಪ್ರವೇಶಿಸುವುದರ ಮೂಲಕ ಹೊಸ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶುಭ ಹಾರೈಸಿದರು.

ಬಂಟವಾಳ ಬಂಟರ ಸಂಘದಿಂದ ಖಾದರ್ ಅವರಿಗೆ ವಿವಿಧ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಇದನ್ನು ಪೂರೈಸುವುದಾಗಿ ಅವರು ಭರವಸೆ ನೀಡಿದರು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ವಿದ್ಯಾನಿಧಿಯ ವಿತರಣೆಯಲ್ಲಿ ಸಹಕರಿಸಿದ ಬಂಟ್ವಾಳ ನಿವಾಸಿ ಆಲ್ ಕಾರ್ಗೋಸಂಸ್ಥೆಯ ಮುಖ್ಯಸ್ಥ ಶಶಿಕಿರಣ್ ಶೆಟ್ಟಿ ಅವರ ಸಹಕಾರ ಅಪಾರವಾಗಿದೆ.ಸಂಘದ ಮೂಲಕ ಸಮಾಜದ ಜೊತೆ ಇತರ ಸರ್ವ ಸಮಾಜ ಬಾಂಧವರಿಗೆ ಕೂಡ ನೆರವನ್ನು ನೀಡಲಾಗುತ್ತಿದೆ‌ ಎಂದರು.


ಕಾರ್ಗೋಲಾಜೆಸ್ಟಿಕ್ಸ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ( ಸಿಎಸ್ ಆರ್) ಡಾ.ನೀಲ್ ರತನ್ ಶೆಂಡೆ ಅವರು ಮಾತನಾಡಿ, ಕಾರ್ಗೋಲಾಜೆಸ್ಟಿಕ್ಸ್ ಸಂಸ್ಥೆಯು ಸಾಮಾಜಿಕ ಚಟುವಟಿಕೆ ಸಹಿತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಯುವಜನಾಂಗ ರಾಷ್ಟ್ರ ನಿರ್ಮಾಣದ ಜತೆಗೆ ತಮ್ಮ ಮುಂದಿನ ಭವಿಷ್ಯದ  ಕನಸನ್ನು ನನಸಾಗಿಸುವ ಗುರಿಯನ್ನು ಹೊಂದಬೇಕು ಎಂದರು.ಇದೇ ವೇಳೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಅಬಿನಂದಿಸಲಾಯಿತು.


ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ,ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ.,ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ,ಮಹಿಳಾ ಘಟಕದ ಅಧ್ಯಕ್ಷೆ ರಮಾ ಎಸ್.ಭಂಡಾರಿ,ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ,ಕಾರ್ಯಕ್ರಮದ ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ ಹಾಗೂ ಬಂಟ ಸಂಘದ  ವಿವಿಧ ವಲಯಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು.

ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿದರು. ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು.ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter