ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ
ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್ ಆಯ್ಕೆ
ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹರಿಕೇಶ್ ಶೆಟ್ಟಿ ನಡಿಗುತ್ತು ಪುನರಾಯ್ಕೆಯಾದರೆ, ನೂತನ ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್ ಬಜಿಲೊಟ್ಟು ಅವಿರೋಧ ಆಯ್ಕೆಯಾದರು.

ಒಟ್ಟು ೧೧ ಸದಸ್ಯ ಬಲದ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ೫, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತ ತಲಾ ಮೂವರು ಸದಸ್ಯರಿದ್ದಾರೆ. ಅಧ್ಯಕ್ಷ ಚುನಾವಣೆಗೆ ಹಾಲಿ ಅಧ್ಯಕ್ಷ ಹರಿಕೇಶ ಶೆಟ್ಟಿ, ಕಾಂಗ್ರೆಸ್ ಬೆಂಬಲಿತ ಸದಸ್ಯ ಮೊಹಮ್ಮದ್ ಉಮರ್ ಫಾರೂಕ್ ಮತ್ತು ಎಸ್‌ಡಿಪಿಐ ಬೆಂಬಲಿತ ಸದಸ್ಯೆ ಶೈನಾಝ್ ಸ್ಪರ್ಧಿಸಿದ್ದರು. ಒಂದು ಅಡ್ಡ ಮತದೊಂದಿಗೆ ಹರಿಕೇಶ್ ಶೆಟ್ಟಿಗೆ ೬, ಮೊಹಮ್ಮದ್ ಉಮರ್ ಫಾರೂಕ್‌ಗೆ ೨ ಮತ್ತು ಶೈಜಾಝ್‌ಗೆ ೩ ಮತಗಳು ಬಿದ್ದಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಕುಮಾರ್, ಕಾಂಗ್ರೆಸ್ ಬೆಂಬಲಿತ ಮಮತಾ ಸನಿಲ್ ಮತ್ತು ಎಸ್‌ಡಿಪಿಐ ಬೆಂಬಲಿತ ಮೊಹಮ್ಮದ್ ಅಝರುದ್ದೀನ್ ನಾಮಪತ್ರ ಸಲ್ಲಿಸಿದ್ದರು. ಮತದಾನದ ವೇಳೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸದಸ್ಯರು ಗೈರಾಗಿದ್ದು, ಬಿಜೆಪಿ ಬೆಂಬಲಿತ ದಿನೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಿಭಾಗದ ಬಿಇಒ ಜೇಮ್ಸ್ ಕುಟಿನ್ಹೋ ಚುನಾವಣಾಧಿಕಾರಿಯಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಿಡಿಒ ಅನಿತಾ ವಿ. ಕ್ಯಾಥರಿನ್, ಪಂಚಾಯತ್ ಸಿಬ್ಬಂದಿ ಸಹಕರಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮಾಜಿ ಉಪಾಧ್ಯಕ್ಷೆ ರತ್ನಾ ಗುತ್ತೊಟ್ಟು ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.