ಕಲ್ಲಡ್ಕ : ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘ (ರಿ)ದ ವತಿಯಿಂದ ಹಿರಿಯ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕ್ರೀಡಾಕೂಟ ದಂಡೆಮಾರ್ ಗದ್ದೆಯಲ್ಲಿ ನಡೆಯಿತು .
ಶ್ರೀರಾಮ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಗದ್ದೆಗೆ ಹಾಲೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಣ್ಣಿನೊಂದಿಗಿನ ಒಡನಾಟ ಅದು ತಾಯಿ ಮಗನ ಸಂಬಂಧದ ಹಾಗೆ. ಮಣ್ಣನ್ನು ಪ್ರೀತಿಸಿದವರು ಜಗತ್ತನ್ನು ನೋಡುವ ದೃಷ್ಟಕೋನವೆ ವಿಶಿಷ್ಟವಾದುದು. ಸರ್ವರಿಗೂ ಒಳಿತನ್ನು ಬಯಸುವ ವಿಶಾಲ ಮನೋಭಾವ ಈ ಮಣ್ಣಿನೊಂದಿಗೆ ಮಿಳಿತವಾಗಿದೆ ಎಂದರು .
ಪದವಿ ವಿಭಾಗದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರಕಟ್ಟೆ, ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘದ ಸಂಯೋಜಕ ಯತಿರಾಜ್ ಪಿ.,ಸಂಘದ ಅಧ್ಯಕ್ಷ ರಾಜೇಶ್ ನರಿಂಗಾನ,ಕಾರ್ಯದರ್ಶಿ ಶಿವಪ್ರಸಾದ್ ಸುದೇಕಾರ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿನಿ ಅನ್ವಿತಾ ಸ್ವಾಗತಿಸಿ, ಉದಯ್ ಸಾಲಿಯಾನ್, ತೀರ್ಥೆಶ್ ಕೆ ನಿರೂಪಿಸಿದರು. ಅನುಷಾ ಕಲ್ಲಡ್ಕ ವಂದಿಸಿದರು.