Published On: Tue, Aug 8th, 2023

ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದ ದುರ್ವಾಸನೆ ಮುಕ್ತಗೊಳಿಸಲು ಎಲ್ಲ ರೀತಿಯ ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುವುದು:ಮಾಜಿ ಶಾಸಕ ಜೆ. ಆರ್. ಲೋಬೊ

ಕೈಕಂಬ: ವಾಮಂಜೂರಿನ ಓಂಕಾರ ನಗರದಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದಿಂದ ಹೊರಸೂಸುತ್ತಿರುವ ದುರ್ವಾಸನೆ ತಡೆಗಟ್ಟಲು ಜಿಲ್ಲಾಡಳಿತದ ಆದೇಶ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಹಂತಹAತವಾಗಿ ಎಲ್ಲ ರೀತಿಯ ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಭವಿಷ್ಯದಲ್ಲಿ ಈ ಘಟಕದಿಂದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದ ತೆ ನೋಡಿಕೊಳ್ಳಲಾಗುವುದು ಎಂದು ಘಟಕದ ವ್ಯವಸ್ಥಾಪಕ ನಿರ್ದೇಶಕ, ಮಂಗಳೂರಿನ ಮಾಜಿ ಶಾಸಕ ಜೆ. ಆರ್. ಲೋಬೊ ಹೇಳಿದರು.

ದುರ್ವಾಸನೆ ಮುಕ್ತಗೊಳಿಸಲು ಘಟಕದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕೈಗೊಂಡಿರುವ ಕ್ರಮಗಳು ಮತ್ತು ಘಟಕದ ನಿರ್ವಹಣೆ ಬಗ್ಗೆ ಆ. ೭ರಂದು ಖುದ್ದಾಗಿ ಮಾಹಿತಿ ನೀಡಿದ ಬಳಿಕ ಘಟಕದೊಳಗೆ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಲೋಬೊ ಮಾತನಾಡಿ, ಅಣಬೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರಾಸಾಯನಿಕ ಬಳಕೆಯಾಗುತ್ತಿಲ್ಲ. ಹೈಟೆಕ್ ಮಾದರಿಯ ಸಾವಯವ ಗೊಬ್ಬರ ಬಳಕೆಯ ವಾಣಿಜ್ಯ ಕೃಷಿ ಇದಾಗಿದೆ. ಅಣಬೆ ಉತ್ಪಾದಿಸಲು ಭತ್ತದ ಹುಲ್ಲು, ಗೋಧಿ ಹುಲ್ಲು, ದನದ ಗೊಬ್ಬರ, ಕುದುರೆ ಗೊಬ್ಬರ ಮತ್ತು ಕೋಳಿ ಗೊಬ್ಬರ ಮಿಶ್ರಣ ಪ್ರಕ್ರಿಯೆ ನಡೆಯುತ್ತದೆ. ಈ ಹಂತದಲ್ಲಿ ಘಟಕದಿಂದ ದುರ್ವಾಸನೆ ಸೋರಿಕೆಯಾಗುತ್ತಿದ್ದು, ಅದೀಗ ಶೇ. ೯೦ರಷ್ಟು ಕಡಿಮೆಯಾಗಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಗೊಬ್ಬರ ತಯಾರಿಕಾ ಘಟಕದ ಸುತ್ತಲೂ ತಗಡು ಶೀಟಿನಿಂದ ಮುಚ್ಚಲಾಗಿ, ಘಟಕದ ಒಳಗಿನ ದುರ್ವಾಸನೆ ಸೋರಿಕೆಯಾಗದಂತೆ ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಸುಮಾರು ೫೦ ಲಕ್ಷ ರೂ ವೆಚ್ಚದ ನಾಲ್ಕು ದುರ್ವಾಸನೆ ಶುದ್ಧೀಕರಿಸುವ ಉಪಕರಣ ಅಳವಡಿಸಲಾಗಿದ್ದು, ಇಲ್ಲಿಂದ ಹೊರ ಸೂಸುವ ಗಾಳಿ ಪರಿಶುದ್ಧವಾಗಿರುತ್ತದೆ. ಘಟಕದ ಕೆಲವು ಗ್ಯಾಪ್(ಅಂತರ) ಮುಚ್ಚುವ ಕೆಲಸ ನಡೆಯುತ್ತಿದೆ. ಈ ಎಲ್ಲ ಕೆಲಸ ಮುಗಿದಾಗ ಘಟಕದಿಂದ ದುರ್ವಾಸನೆ ಶೂನ್ಯಕ್ಕೆ ಇಳಿಯಲಿದೆ ಎಂದು ಲೋಬೊ ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಘಟಕದಿಂದ ದುರ್ವಾಸನೆ ಬರುತ್ತಿತ್ತು. ಆದರೆ ಈಗ ಪ್ರಮಾಣ ಕಡಿಮೆಯಾಗಿದೆ. ದುರ್ವಾಸನೆ ಶೂನ್ಯಕ್ಕೆ ಇಳಿಸಬೇಕೆಂಬ ಇರಾದೆ ಇದೆ. ಜನರಿಗೆ ತೊಂದರೆ ಕೊಡುವ ಉದ್ದೇಶ ನಮ್ಮಲ್ಲಿಲ್ಲ. ಘಟಕದಲ್ಲಿ ಸುಮಾರು ೧೭೦ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ. ಈ ಘಟಕವು ದುರ್ವಾಸನೆ ಮುಕ್ತಗೊಂಡು, ದೇಶದಲ್ಲಿ ಅಣಬೆ ಉತ್ಪಾದಿಸಬಹುದಾದ ಇತರ ಘಟಕಗಳಿಗೆ ಇದು ಮಾದರಿಯಾಗಬೇಕೆಂದು ಇಚ್ಚಿಸಿದ್ದೇನೆ ಎಂದರು.

ಘಟಕದೊಳಗೆ ಕಾರ್ಯಾಚರಿಸುತ್ತಿರುವ ಹಂದಿ ಸಾಕಾಣಿಕಾ ಕೇಂದ್ರ ತೆರವಿಗೆ ಮನಪಾ ಆದೇಶವಿದೆಯಲ್ಲಾ ಎಂದು ಕೇಳಿದಾಗ, ಸುಮಾರು ಮೂರು ಎಕ್ರೆ ಜಾಗವನ್ನು ಲೀಸ್‌ಗೆ ಖರೀದಿಸಿದ್ದೇವೆ. ಹಿಂದಿನ ಮಾಲಕರಲ್ಲಿದ್ದ ಹಂದಿ ಸಾಕಾಣಿಕಾ ಕೇಂದ್ರ ನಮಗೆ ಸೇರಿದಲ್ಲ. ಹಾಗಾಗಿ ಆ ಆದೇಶಕ್ಕೂ ಅಣಬೆ ಘಟಕಕ್ಕೂ ಯಾವುದೇ ಸಂಬAಧವಿಲ್ಲ ಎಂದ ಲೋಬೊ, ಅಣಬೆ ಘಟಕವು ಜನಸ್ನೇಹಿಯಾಗಬೇಕೆಂಬ ಇರಾದೆ ನನ್ನದಾಗಿದೆ ಎಂದರು.

ಜಿಲ್ಲಾಧಿಕಾರಿಯವರ ಆದೇಶದಂತೆ ಆಗಸ್ಟ್ ೧೯ರವರೆಗೆ ಪ್ರಾಯೋಗಿಕ ನೆಲೆಯಲ್ಲಿ ಘಟಕದಲ್ಲಿ ಅಣಬೆ ಉತ್ಪಾದಿಸಲಾಗುತ್ತಿದೆ. ದುರ್ವಾಸನೆ ಬಗ್ಗೆ ವರದಿ ಮಾಡಲು ಜಿಲ್ಲಾಡಳಿತ ರಚಿಸಿರುವ ಸಮಿತಿಯ ಸದಸ್ಯರು ಜುಲೈ ೩೧ರಿಂದ ಪ್ರತಿನಿತ್ಯದ ವರದಿ ನೀಡುತ್ತಿದ್ದಾರೆ ಎಂದವರು, ಜಿಲ್ಲಾಡಳಿತ ಮತ್ತು ಸಮಿತಿ ಸೂಚಿಸಿದ ಕ್ರಮ ಅಳವಡಿಕೆಗೆ ಘಟಕ ಬದ್ಧವಾಗಿದೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter