ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಸರ್.ಸಿ.ವಿ. ರಾಮನ್‌ರವರ ‘ರಾಮನ್ ಪರಿಣಾಮ’ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಮತ್ತು ‘ಜ್ಞಾನಧಾರ’ ವೈವಿಧ್ಯಮಯ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ನೀರಿನ ಕಾರಂಜಿ ಚಿಮ್ಮಿಸುವುದರ ಮೂಲಕ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಸಿ ವಿ ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅತಿಥಿ ಅಭ್ಯಾಗತರಿಗೆ ಗಿಡ ನೀಡಿ ಸ್ವಾಗತಿಸಲಾಯಿತು.

ಅತಿಥಿಯಾಗಿದ್ದ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರಾದ ವಸಂತಿ.ಕೆ ಇವರು ಮಾತನಾಡಿ “ಇಂದಿನ ವಿಜ್ಞಾನ ಮುಂದಿನ ತಂತ್ರಜ್ಞಾನ” ಎಂಬ ಹಾಗೆ ವಿಜ್ಞಾನದೊಂದಿಗೆ ಭವಿಷ್ಯದ ಮಹತ್ವ ಸಾರುವ ಮಾತು ಮತ್ತು ಅಧ್ಯಯನದ ಅನುಭವ. ದಿನ ನಿತ್ಯದ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೊಪೆಸರ್ ಡಾ|ಸವಿತಾ ಎಂ.ಬಿ ಮಾತನಾಡಿ, “ಸಿ.ವಿ ರಾಮನ್ ಅವರ ಸಾಧನೆ ಅಪಾರವಾಗಿದೆ, ನಮ್ಮಲ್ಲಿಯು ಪ್ರಯತ್ನವಿದ್ದರೆ, ನಮ್ಮನ್ನು ಪ್ರಪಂಚ ಗುರುತಿಸುತ್ತದೆ. ಅದಕ್ಕೆ ಸಿ ವಿ ರಾಮನ್‌ನವರೆ ಉದಾಹರಣೆ” ಎಂದು ತಿಳಿಸಿದರು.

ಸಾವಯವ ಕೃಷಿಕರಾದ ಶಿವಪ್ರ‍್ರಸಾದ ಮಲೆಬೆಟ್ಟು ಮಾತನಾಡಿ, “ವಿಜ್ಞಾನ ಈಗ ಅತ್ಯಂತ ವೇಗವಾಗಿ ಮುಂದುವರಿದಿದೆ. ಸಂಸ್ಕೃತಿ ಹಾಗೂ ಜೀವನ ಪದ್ಧತಿ ಇವೆರಡರಲ್ಲಿ ವಿಜ್ಞಾನಕ್ಕೆ ಶಕ್ತಿ ತುಂಬಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿಜ್ಞಾನಕ್ಕೆ ಪೂರಕವಾದ ಜೀವನ ವ್ಯವಸ್ಥೆಯನ್ನು ಸೃಷ್ಠಿ ಮಾಡಬೇಕು ಎಂದರು.
ನಂತರ ವಿಜ್ಞಾನ ಕ್ಷೇತ್ರದ ಸಾಧಕರಾದ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರು ವಸಂತಿ.ಕೆ , ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೊಪೆಸರ್ ಡಾ|ಸವಿತಾ ಎಂ.ಬಿ, ಸಾವಯವ ಕೃಷಿಕರಾದ ಶಿವಪ್ರಸಾದ ಮಲೆಬೆಟ್ಟು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ, ಲಾಸ್ಯ ಪಿ. ಡಿ ಪ್ರೇರಣಾ ಗೀತೆ ಹಾಡಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಅಧ್ಯಾಪಕರಾದ ಹೇಮಾಲತಾ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ-ಗಣಿತ ಮಾದರಿ ಹಾಗೂ ಔಷಧೀಯ ಸಸ್ಯಗಳ ಪ್ರದರ್ಶನ ವೀಕ್ಷಿಸಿದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕೃಷ್ಣಮೂರ್ತಿ, ಸಂಘದ ನಿವೃತ್ತ ಪ್ರಚಾರಕರು ಹಾಗೂ ಕರಾಟೆ ಶಿಕ್ಷಕರು ಭುವನೇಶ್ವರ , ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಮುಖ್ಯೋಪಾಧ್ಯಾಯರು ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಪ್ರಾಪ್ತಿ ಸ್ವಾಗತಿಸಿ, ಸಾನ್ವಿ ಸನಿಲ್ ವಂದಿಸಿದರು.ತನ್ಮಯಿ ರೈ ಕಾರ್ಯಕ್ರಮ ನಿರೂಪಿಸಿದರು.
