ಬಂಟ್ವಾಳ:ಅವಿಭಜಿತ ಜಿಲ್ಲೆಯ ಕಂಬಳಕೂಟದಲ್ಲೇ ವಿಶಿಷ್ಠ ಮತ್ರು ಅದ್ದೂರಿಯಾಗಿ ನಡೆಯುವ ಪ್ರತಿಷ್ಠಿತ *ಬಂಟ್ವಾಳ ಕಂಬಳ” ಕ್ಕೆ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮೂಡೂರು-ಪಡೂರು ಜೋಡುಕರೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಮಾ. 7 ರಂದು ಬೆಳಿಗ್ಗೆ ಕಂಬಳಕ್ಕೆ ಚಾಲನೆ ದೊರೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕೂಟದಲ್ಲಿ ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ,ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ಶುಕ್ರವಾರ ಕಂಬಳಕರೆಯ ಬಳಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ. 6 ರಂದು ರಾಜ್ಯದ 17 ನೇ ಬಜೆಟ್ ಮಂಡಿಸಿದ ಮರುದಿನವೇ ಮುಖ್ಯಮಂತ್ರಿಯವರು ಸಂಜೆ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗಾಗಮಿಸಿ ಬಳಿಕ ರಸ್ತೆ ಮೂಲಕ ನೇರ ಕಂಬಳಕ್ಕೆ ಬರಲಿದ್ದಾರೆ.ರಾತ್ರಿ 8.30 ರವರೆಗೆ ಇದ್ದು,ನಂತರ ವಾಪಾಸ್ ಬೆಂಗಳೂರಿಗೆ ತೆರಳಲಿದ್ದಾರೆ ಎಂದ ಅವರು ಮುಖ್ಯಮಂತ್ರಿಯವರು ಕಳೆದ ವರ್ಷವೇ ಬರುವವರಿದ್ದು,ಕಾರಣಾಂತರದಿಂದ ಕೊನೆಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಈ ವರ್ಷ ಖುದ್ದು ಸಿಎಂ ಅವರೇ ಕಂಬಳದಲ್ಲಿ ಭಾಗವಹಿಸುವ ಮಾತುಕೊಟ್ಟಂತೆ ಮೂಡೂರು-ಪಡೂರು ಕಂಬಳದಲ್ಲಿ ಭಾಗವಹಿಸುತ್ತಿರುವುದು ನಮಗೆಲ್ಲಾ ಸಂತಸ ಮತ್ತು ಸ್ಪೂರ್ತಿಯನ್ನು ತಂದಿದೆ ಎಂದರು.
ಮುಖ್ಯಮಂತ್ರಿಯವರು ಭಾಗವಹಿಸುವ ಹಿನ್ನಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಎಲ್ಲಾ ರೀತಿಯ ಸಹಕಾರವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ನೀಡಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಮಾನಾಥ ರೈ ಹೇಳಿದರು.

ಕಂಬಳೋತ್ಸವದ ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದು, 15ನೇ ವರ್ಷದ ಮೂಡೂರು-ಪಡೂರು ಜೋಡುಕೆರೆ ಕಂಬಳವು ಅದ್ದೂರಿಯಾಗಿ ಮಾ.7 ಮತ್ತು 8 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಪ್ರತಿ ವರ್ಷವು ಹೊಸ ಅವಿಷ್ಕಾರದೊಂದಿಗೆ ಬಂಟ್ವಾಳ ಕಂಬಳವನ್ನು ಆಯೋಜಿಸಲಾಗುತ್ತಿದ್ದು,ಈ ವರ್ಷ ಶಾಶ್ವತವಾದ ವೇದಿಕೆ ನಿರ್ಮಿಸಲಾಗಿದ್ದು,ದೊಡ್ಡ ಒಂದೇ ಪ್ಯಾನ್ ವೇದಿಕೆಗೆ ಅಳವಡಿಸಲಾಗಿದೆ.ವಿಶೇಷವಾಗಿ ಕಂಬಳ ಕರೆಯ ಸಮೀಪ ವಿಶೇಷವಾದ “ಆಹಾರಮೇಳ” ಇರಲಿದೆ.ಇದೇ ಮೊದಲಿಗೆ ಛಾಯಾಗ್ರಾಹಕರಿಗೆ ಜಿಲ್ಲೆಯಲ್ಲಾದ ಕಂಬಳದ ಛಾಯಾಚಿತ್ರದ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಲಿದೆ ಎಂದರು.
ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರೊಂದಿಗೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ಸಾರೊಗೆ ಸಚಿವ ರಾಮಲಿಂಗರೆಡ್ಡಿ ಸಹಿತ ವಿವಿಧ ಕೇತ್ರದ ಗಣ್ಯರು ಭಾಗವಹಿಸಲಿದ್ದಾರೆ.ಬಂಟ್ಚಾಳ ಸೇರಿದಂತೆ ಜಿಲ್ಲೆಯ ಜನತೆ ಇದು ನಮ್ಮೂರಿನ ಕಂಬಳ ಎಂದು ಭಾವಿಸಿ ಈ ಕಂಬಳಕೂಟದಲ್ಲಿ ಭಾಗವಹಿಸುವಂತೆ ಕೋರಿದರು.
ಈ ಸಂದರ್ಭ ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್,ಸಮಿತಿ ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಪದ್ಮನಾಭ ರೈ ಕಲ್ಲಡ್ಕ, ಬೇಬಿ ಕುಂದರ್, ಬಿ. ಎಂ ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಸಿದ್ದೀಕ್ ಗುಡ್ಡೆಅಂಗಡಿ ಉಪಸ್ಥಿತರಿದ್ದರು.
