ಅಣಬೆ ಉತ್ಪಾದನಾ ಘಟಕದಲ್ಲಿ ಮನಪಾ ವಿಪಕ್ಷ ನಾಯಕರ ತಂಡ ಪರಿಶೀಲನೆ
ಕೈಕಂಬ : ವಾಮಂಜೂರಿನ ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಹೊರಸೂಸುತ್ತಿರುವ ದಟ್ಟ ದುರ್ವಾಸನೆ ಪರಿಶೀಲಿಸುವ ಉದ್ದೇಶದಿಂದ ಮನಪಾ ವಿಪಕ್ಷ ನಾಯಕರ ತಂಡ ಆ. ೬ರಂದು ಫ್ಯಾಕ್ಟರಿಗೆ ಬೇಟಿ ನೀಡಿ, ಪರಿಶೀಲನೆ ನಡೆಸಿತು.

ಮನಪಾ ವಿಪಕ್ಷ ನಾಯಕ ಕಾರ್ಪೊರೇಟರ್ ನವೀನ್ ಡಿ’ಸೋಜ, ಕಾಂಗ್ರೆಸ್ ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಲ್ಯಾನ್ಸ್ ಲಾರ್ಡ್ ಪಿಂಟೊ, ಜೆಸಿಂತಾ ಆಲ್ಫೆçಡ್, ಪ್ರವೀಣ್‌ಚಂದ್ರ ಆಳ್ವ, ಸುನಿಲ್ ಮತ್ತಿತರರು ಇದ್ದರು.
ಕಾರ್ಪೊರೇಟರ್‌ಗಳ ತಂಡದ ಸದಸ್ಯರು ಅಣಬೆ ಫ್ಯಾಕ್ಟರಿಯೊಳಗೆ ಪ್ರವೇಶಿಸಿ ಫ್ಯಾಕ್ಟರಿ ಪ್ರಮುಖರಲ್ಲಿ ಮಾತುಕತೆ ನಡೆಸುವುದಕ್ಕಿಂತ ಮುಂಚೆ ಓಂಕಾರನಗರ ಮತ್ತು ಆಶ್ರಯನಗರಕ್ಕೆ ಭೇಟಿ ನೀಡಿ, ಘಟಕದಿಂದ ಹೊರಹೊಮ್ಮುತ್ತಿರುವ ದುರ್ವಾಸನೆ ಬಗ್ಗೆ ಖುದ್ದು ಅನುಭವ ಪಡೆದುಕೊಂಡರು.
ಕಾರ್ಪೊರೇಟರ್‌ಗಳ ತಂಡಕ್ಕೆ ಸ್ಥಳೀಯ ವಸತಿ ಪ್ರದೇಶದ ಅನೇಕರು ಮೌಖಿಕ ದೂರು ನೀಡಿದ್ದು, ಸ್ಥಳೀಯರ ಕಷ್ಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ತಂಡ ಭರವಸೆ ನೀಡಿದೆ ಎಂದು ಘಟಕ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿ ಮಹಿಳೆಯೊಬ್ಬರು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ರಘು ಸಾಲ್ಯಾನ್ ಹಾಗೂ ಕೆಲವು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.