ಮೆಸ್ಕಾಂ ಖಾಸಗೀಕರಣ ಅರ್ಜಿ ರದ್ಧತಿಗೆ

ಮೆಸ್ಕಾಂ ಎಂಪ್ಲಾಯಿಸ್ ಒಕ್ಕೂಟ ಮನವಿ

ಗುರುಪುರ : ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾನಾಂತರ ವಿದ್ಯುತ್ ಪೂರೈಕೆ ಪರವಾನಿಗೆ ಪಡೆಯಲು ಖಾಸಗಿಯಾಗಿ ಟಾಟಾ ಪವರ್ ಕಾರ್ಪೊರೇಶನ್ ಸಲ್ಲಿಸಿರುವ ಅರ್ಜಿ ರದ್ದುಪಡಿಸುವಂತೆ ಕೋರಿ ಫೆಡರೇಶನ್ ಆಫ್ ಕರ್ನಾಟಕ ಎಲೆಕ್ಟಿçಸಿಟಿ ಬೋರ್ಡ್ ಎಂಪ್ಲಾಯಿಸ್ ಯೂನಿಯನ್ ಮತ್ತು ಅಸೋಸಿಯೇಶನ್ ಪದಾಧಿಕಾರಿಗಳು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಮನವಿ ನೀಡಿದರು.

ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿಯಾಗಿ ಕಾರ್ಯ ನಿರ್ವಹಿಸಬಹುದಾದ ಟಾಟಾ ಪವರ್ ಸಂಸ್ಥೆಯ ಬಗ್ಗೆ ಶಾಸಕರಿಗೆ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಅವರು ಮಾಹಿತಿ ನೀಡಿ, ೧೦೦ ವರ್ಷ ಹಳೆಯದಾದ ಮೆಸ್ಕಾಂ ಮೂಲಸೌಕರ್ಯ(ಜಾಲ) ಬಳಸಿಕೊಂಡು ಖಾಸಗಿ ವಿದ್ಯುತ್ ಸಂಸ್ಥೆ ನಗರ ಪ್ರದೇಶದ ಕೈಗಾರಿಕೆ, ವಾಣಿಜ್ಯ ಗ್ರಾಹಕರಿಗೆ ಮಾತ್ರ ವಿದ್ಯುತ್ ಪೂರೈಕೆಗೆ ಮುಂದಾಗಿದೆ. ಅಂತಹ ಸಂದರ್ಭದಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ, ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ವಿದ್ಯುತ್ ದರ ಸಹಜವಾಗಿಯೇ ಹೆಚ್ಚಲಿದೆ. ಆಗ ಮೆಸ್ಕಾಂ ಸಂಸ್ಥೆಯು ಪ್ರಸಕ್ತ `ಸೇವೆ’ಯ ಬದಲಾಗಿ ಉದ್ಯಮದ ನೆಲೆಯಲ್ಲಿ ವ್ಯವಹರಿಸಬೇಕಾಗುತ್ತದೆ ಎಂದರು.

ಖಾಸಗಿ ವಿದ್ಯುತ್ ಸಂಸ್ಥೆಯು ಆರಂಭದಲ್ಲಿ ವಿದ್ಯುತ್ ದರ ಕಡಿಮೆ ಮಾಡುವ ಭರವಸೆ ನೀಡಲಿದ್ದರೂ, ಭವಿಷ್ಯದಲ್ಲಿ ನಿರ್ವಹಣೆ ಕಾರಣ ನೀಡಿ ದರ ಹೆಚ್ಚಿಸುವ ಆತಂಕ ಇದೆ. ಖಾಸಗೀಕರಣದಿಂದ ಸಾಮಾಜಿಕ ಭದ್ರತೆ, ಮೀಸಲಾತಿಗೆ ಧಕ್ಕೆ ಉಂಟಾಗಲಿದೆ. ಜೊತೆಗೆ ಮೆಸ್ಕಾಂನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಇರುವಂತೆ ಖಾಸಗಿ ಕ್ಷೇತ್ರದ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಇರದು. ಟಾಟಾ ಪವರ್ ಕಾರ್ಪೊರೇಶನ್ ಈಗ ಒರಿಸ್ಸಾದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಮೆಸ್ಕಾಂ ವಿದ್ಯುತ್ ದರಕ್ಕೆ ಹೋಲಿಸಿದರೆ ಅಲ್ಲಿನ ವಿದ್ಯುತ್ ದರ ಶೇ. ೫೦ರಷ್ಟು ಅಧಿಕ ಇದೆ ಎಂದು ಒಕ್ಕೂಟ ವಿವರಿಸಿದೆ.

ಒಂದೊಮ್ಮೆ ಮೆಸ್ಕಾಂ ಖಾಗೀಕರಣಗೊಂಡಲ್ಲಿ ಭವಿಷ್ಯದಲ್ಲಿ ಭವಿಷ್ಯದಲ್ಲಿ ಈ ಸಂಸ್ಥೆ ಬಿಎಸ್‌ಎನ್‌ಎಲ್‌ನಂತೆ ಸೊರಗಲಿದೆ. ಅಂತಹ ಸಂದರ್ಭ ಎದುರಾದಲ್ಲಿ ವಿದ್ಯುತ್ ಗ್ರಾಹಕರು ಮತ್ತು ರೈತರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಖಾಸಗಿ ಸಂಸ್ಥೆಯ ಈ ಅರ್ಜಿಗೆ ವಿದ್ಯುಚ್ಚಕ್ತಿ ಕಾಯ್ದೆ ೧೦೮ನೇ ಪರಿಚ್ಛೇದದಡಿ ಕೆಇಆರ್‌ಸಿ ಮನ್ನಣೆ ನೀಡಬಾರದು ಮತ್ತು ಇದಕ್ಕೆ ಸರ್ಕಾರವೂ ಉತ್ತೇಜನ ನೀಡದೆ ಅರ್ಜಿ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರನಿಧಿಗಳ ಮೆಸ್ಕಾ ಜೊತೆಗೆ ನಿಲ್ಲಬೇಕು ಎಂದು ಒಕ್ಕೂಟ ಮನವಿ ಮಾಡಿಕೊಂಡಿದೆ.

ಶಾಸಕರನ್ನು ಭೇಟಿಯಾಗಿ ಮನವಿ ನೀಡಿದ ಒಕ್ಕೂಟದ ನಿಯೋಗದಲ್ಲಿ ಒಕ್ಕೂಟದ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್, ಅಭಿಷೇಕ್(ಎಇಇ ಕಾವೂರು), ಚಂದ್ರಶೇಖರ ಪೂಜಾರಿ(ಎಇಇ ಅತ್ತಾವರ), ಗಣೇಶ್(ಎಇಇ ಬೈಕಂಪಾಡಿ), ವಸಂತ ಕುಮಾರ್(ಎಇಇ ಮಣ್ಣಗುಡ್ಡೆ), ನಿತೇಶ್(ಎಇಇ ಕೊಣಾಜೆ), ಮೆಸ್ಕಾಂ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಷಣ್ಮುಗ ಬೋವಿ ಹಾಗೂ ಒಕ್ಕೂಟದಲ್ಲಿರುವ ಯೂನಿಯನ್ ಮತ್ತು ಅಸೋಸಿಯೇಶನ್ ಪದಾಧಿಕಾರಿಗಳು ಇದ್ದರು.

By Suddi9

Leave a Reply

Your email address will not be published. Required fields are marked *