ಗ್ರಾಮಸಭೆಗೆ ಅಧಿಕಾರಿಗಳ ಗೈರು: ಗ್ರಾಮಸ್ಥರ ಪ್ರತಿಭಟನೆ
ಬಂಟ್ವಾಳ: ಗ್ರಾಮ ಸಭೆಯಲ್ಲಿ ತಾಲೂಕಿನ ವಿವಿಧ 15 ಇಲಾಖೆಯ ಅಧಿಕಾರಿಗಳ ಪೈಕಿ ಕೇವಲ 4 ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸಿ, ಉಳಿದಂತೆ ಗೈರು ಹಾಜರಾದ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ನಡೆಸದಂತೆ ಗ್ರಾಮಸ್ಥರು ಪ್ರತಿಭಟಿಸಿದ ವಿದ್ಯಮಾನ
ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಗ್ರಾಮ ಪಂಚಾಯತ್ ನ 2023- 24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ನಡೆಯಿತು.
ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ ಯವರು ಅಧ್ಯಕ್ಷತೆ ವಹಿಸಿದ್ದರು.

ಈ ಮಧ್ಯೆ ಮಾರ್ಗದರ್ಶಿ ಅಧಿಕಾರಿಯವರು ಸಮಜಾಯಿಷಿಕೆ ನೀಡಿ ಇನ್ನುಳಿದ ಇಲಾಖಾಧಿಕಾರಿಗಳು ಮತ್ತೊಂದು ಗ್ರಾಮ ಸಭೆಯಲ್ಲಿ ಭಾಗವಹಿಸಿರುವುದರಿಂದ ಅಲ್ಲಿಗೆ ತೆರಳಿರುತ್ತಾರೆ ಅಲ್ಲಿ ಸಭೆ ಮುಗಿಸಿ ಬಳಿಕ ಇಲ್ಲಿ ಸೇರಿಕೊಳ್ಳುತ್ತಾರೆ ಎಂದಾಗ ಗ್ರಾಮಸ್ಥರು ಆಕ್ಷೇಪಿಸಿ ಮಾರ್ಗದರ್ಶಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವಾಗ ಎರಡು ಕಡೆ ಒಂದೇ ದಿನ ಒಂದೇ ಸಮಯಕ್ಕೆ ಗ್ರಾಮ ಸಭೆ ಆಯೋಜಿಸುವುದು ಸಮಂಜಸವೇ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ಅವರು ಇನ್ನು ಮುಂದಕ್ಕೆ ಎಲ್ಲಾ ಇಲಾಖಾಧಿಕಾರಿಗಳಿಲ್ಲದೆ ಯಾವುದೇ ಕಾರಣಕ್ಕೂ ಗ್ರಾಮ ಸಭೆ ಮಾಡಲು ಅವಕಾಶ ನೀಡುವುದಿಲ್ಲ, ಈ ಗ್ರಾಮ ಸಭೆಗೆ ಅವಕಾಶ ಮಾಡಿಕೊಡುವಂತೆ ಕೋರಿದ ಹಿನ್ನಲೆಯಲ್ಲಿ ಗ್ರಾಮ ಸಭೆ ಮುಂದುವರಿಸಲು ಗ್ರಾಮಸ್ಥರು ಒಪ್ಪಿದರು.
ವೀರಕಂಬ ಗ್ರಾಮ ವ್ಯಾಪ್ತಿಯಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಎಮ್ಮೆಮಜಲ್ ನಿಂದ ಮಜ್ಜೋನಿ ತನಕದ ಎರಡು ಕಿಲೋಮೀಟರ್ ದೂರದ ಅಂತರದಲ್ಲಿ ಅವೈಜ್ಞಾನಿಕವಾಗಿ 13 ಕಡೆಯಲ್ಲಿ ರಸ್ತೆಗೆ ಹಂಪ್ಸ್ ಅಳವಡಿಸಿರುವುದನ್ನು ಗ್ರಾಮಸ್ಥರು ವಿರೋಧಿಸಿದರಲ್ಲದೆ ತಕ್ಷಣ ತೆರವುಗೊಳಿಸುವಂತೆ ಪಂಚಾಯತ್ ಮೂಲಕ ಹೆದ್ದಾರಿ ಇಲಾಖೆಗೆ ಮನವಿ ಮಾಡುವಂತೆ ಒತ್ತಾಯಿಸಿದರು.
ವೀರಕಂಬ ಗ್ರಾಮದಲ್ಲಿ ಘನತ್ಯಾಜ್ಯ ಘಟಕ ದ ಕೆಲಸಪೂರ್ತಿಯಾಗದೆ ಸ್ವಚ್ಛ ವಾಹನ ಖರೀದಿ ಮಾಡಿ ಅದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಹಾಗೆಯೇ ವೀರಕಂಬ ಅನಂತಾಡಿ ಕ್ರಾಸ್ ರಸ್ತೆ ಜಂಕ್ಷನ್ ನಲ್ಲಿ ತುರ್ತಾಗಿ ಸಿ.ಸಿ ಕ್ಯಾಮೆರಾ ಅವಳಡಿಸಬೇಕು, ನಿಧಾನ ಗತಿಯಲ್ಲಿ ಸಾಗುತ್ತಿರುವ ವೀರಕಂಬ ಗ್ರಾಮದ ಏಕೈಕ ರುದ್ರಭೂಮಿಯ ಕೆಲಸವನ್ನು ಪೂರ್ತಿಗೊಳಿಸಬೇಕು, ಕೆಲಿಂಜ ಶಾಲೆಗೆ ನೀರಿನ ವ್ಯವಸ್ಥೆ, ಮಜಿ ಶಾಲೆಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತುರ್ತಾಗಿ ಕಂಪೌಂಡ್,ಶೌಚಾಲಯ ಹಾಗೂ ಕೆಲವು ಇನ್ನಿತರ ಬೇಡಿಕೆಗಳನ್ನು ಗ್ರಾಮಸ್ಥರು
ಗ್ರಾಮ ಸಭೆಯಲ್ಲಿ ಗಮನಕ್ಕೆ ತಂದರು . ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪೂರಕವಾಗಿ ಸ್ಪಂದಿಸಿದರು.
ಇದೇ ವೇಳೆ ಗ್ರಾಮಸ್ಥರು ಪಂಚಾಯತ್ ನಿಂದ ವಿವಿಧ ಬೇಡಿಕೆಗಳ ಮನವಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದರು.
ಗ್ರಾಮ ಸಭೆಯ ನೂಡಲ್ ಅಧಿಕಾರಿಯಾಗಿ ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ನಡೆಸಿಕೊಟ್ಟರು.
ಗ್ರಾಮ ಸಭೆಯಲ್ಲಿ ಪಶು ಸಂಗೋಪನೆ ಇಲಾಖೆ, ಮೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭಾಗವಹಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರಲ್ಲದೆ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀಲಾ ನಿರ್ಮಲ ವೆಗಸ್, ಸದಸ್ಯರುಗಳಾದ ಜನಾರ್ಧನ ಪೂಜಾರಿ, ರಘು ಪೂಜಾರಿ,ಸಂದೀಪ್, ನಿಶಾಂತ್ ರೈ, ಜಯಪ್ರಸಾದ್, ಅಬ್ದುಲ್ ರಹೀಮಾನ್, ಜಯಂತಿ ಜನಾರ್ಧನ್,ಗೀತಾ ಜಯಶೀಲ ಗಾಂಭೀರ, ಉಮಾವತಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಸಭೆಯಲ್ಲಿ ವಿರಕಂಬ ಗ್ರಾಮ ವ್ಯಾಪ್ತಿಯ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಸ್ವಾಗತಿಸಿ ವಂದಿಸಿದರು.