ಗುರುಪುರ ಪಂಚಾಯತ್ ಗ್ರಾಮಸಭೆ
ಕೈಕಂಬ : ಗುರುಪುರ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನಲ್ಲಿ ಮೂರು ವರ್ಷದ ಹಿಂದೆ ಗುಡ್ಡ ಕುಸಿದು ಮನೆ ಕಳೆದುಕೊಂಡ ಸಂತ್ರಸ್ತರ ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಕಳೆದ ವಾರ ಮುಂದೂಡಟ್ಟಿದ್ದ ಗುರುಪುರ ಪಂಚಾಯತ್ ಗ್ರಾಮಸಭೆ ಜು. ೨೫ರಂದು ಪಂಚಾಯತ್‌ನ ಸಭಾಭವನದಲ್ಲಿ ನಡೆಯಿತು.

ಈಗಾಗಲೇ ಗುರುತಿಸಲಾದ ಸೈಟ್ ಜಾಗದಲ್ಲಿ ಸಂತ್ರಸ್ತ ೧೧ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸಂತ್ರಸ್ತರು ವಾದಿಸಿ, ತಹಶೀಲ್ದಾರ್ ಲಿಖಿತ ಭರವಸೆಗಾಗಿ ಪಟ್ಟು ಹಿಡಿದ ಕಾರಣ ಗ್ರಾಮ ಸಭೆ ಮುಂದೂಲ್ಪಟ್ಟಿತ್ತು. ಈ ಬಾರಿ ಗ್ರಾಮಸಭೆಗೆ ತಹಶೀಲ್ದಾರ್ ಆಗಮಿಸದಿದ್ದರೂ, ಸಂತ್ರಸ್ತರ ಪರವಾಗಿ ಗ್ರಾಮಸ್ಥರು ಅಥವಾ ಅಡ್ಡೂರು ಸದಸ್ಯರು ಬೆಂಬಲ ವ್ಯಕ್ತಪಡಿಸದೆ ಸಾಮಾನ್ಯ ಚರ್ಚೆ ನಡೆಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮಠದಗುಡ್ಡೆ ಸೈಟ್ ವ್ಯಾಪ್ತಿಯ ವಾರ್ಡ್ ಸದಸ್ಯರು ಮತ್ತು ಬಿಜೆಪಿ ಬೆಂಬಲಿತ ಸದಸ್ಯರು, `ತಹಶೀಲ್ದಾರ್ ಬರಲಿ, ಅಲ್ಲಿಯವರೆಗೆ ಗ್ರಾಮಸಭೆ ಸ್ಥಗಿತಗೊಳಿಸಿ’ ಎಂದು ಪಟ್ಟು ಹಿಡಿದರು. ಈ ಮಧ್ಯೆ ಅಡ್ಡೂರು ಭಾಗದ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮದ ಶಿಫಾರಸಿನನಂತೆ ಹಕ್ಕುಪತ್ರ ಲಭಿಸಬೇಕಿದ್ದರೂ, `ತಹಶೀಲ್ದಾರ್ ಬರಬೇಕು, ನಿವೇಶನ ಹಂಚಿಕೆ ಮಾಡಬೇಕು’ ಎಂದು ಅನಗತ್ಯ ವಾದಿಸಿದ್ದ ಅಡ್ಡೂರು ಗ್ರಾಮದ ಸದಸ್ಯರು ಕಳೆದ ಗ್ರಾಮಸಭೆ ರದ್ದುಪಡಿಸಲು ಕಾರಣರಾಗಿದ್ದರು. ಈ ಬಾರಿ ಆ ಸದಸ್ಯರು ತಹಶೀಲ್ದಾರ್ ಅನುಪಸ್ಥಿತಿ ಹೇಗೆ ಮನ್ನಿಸುತ್ತಾರೆ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಪ್ರಶ್ನಿಸಿದರು.
ಇನ್ನೇನು ಈ ಬಾರಿಯೂ ಗ್ರಾಮಸಭೆ ರದ್ದಾಗುವ ಸಾಧ್ಯತೆ ಕಂಡು ಬಂದಾಗ ಅಧ್ಯಕ್ಷರು, ಪಿಡಿಒ ಮತ್ತು ನೋಡೆಲ್ ಅಧಿಕಾರಿ ಡಾ. ಪ್ರದೀಪ್(ಬಿಇಒ) ಅವರು ಪ್ರತ್ಯೇಕವಾಗಿ ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. ಬಳಿಕ ಗ್ರಾಮಸಭೆ ನಡೆಯಿತು.
ಗ್ರಾಮಸ್ಥರು ಮೆಸ್ಕಾಂ, ಎನ್‌ಎಚ್ ಮತ್ತಿತರ ಇಲಾಖಾ ಅಧಿಕಾರಿಗಳಿಗೆ ಮನವಿ ನೀಡಿ ತಮ್ಮ ಸಮಸ್ಯೆಗೆಳಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಪಂಕಜಾ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ವರದಿ ಮಂಡಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಅಶೋಕ್, ವಿವಿಧ ಇಲಾಖಾ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.