ಉಳಾಯಿಬೆಟ್ಟಿನಲ್ಲಿ ಮನೆಗಳಿಗೆ ಕುಸಿದ ಬೃಹತ್ ಗುಡ್ಡ ; ಭಾರೀ ಅಪಾಯದಲ್ಲಿರುವ ಮನೆ
ಮನೆ ಖಾಲಿ ಮಾಡಲು ಉಪತಹಶೀಲ್ದಾರ್ ಸೂಚನೆ
ಕೈಕಂಬ: ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಮೂಡುಜಪ್ಪು ವಾರ್ಡ್ನ ಮೊಹಮ್ಮದ್ ರಫೀಕ್‌ರ ಸಂಬಂಧಿ ಗುಲಾಬ್ ಶಾ ಎಸ್. ಕೆ. ಎಂಬವರ ಮನೆಗೆ ಹತ್ತಿರದ ಗುಡ್ಡ ಕುಸಿದು ಬಂಡೆಗಳು ಉರುಳಿ ಮನೆಗೆ ಬಿದ್ದು ಭಾರೀ ನಷ್ಟ ಸಂಭವಿಸಿದೆ. ಸತತ ಮಳೆಗೆ ಗುಡ್ಡದ ಬಂಡೆಕಲ್ಲುಗಳು ಮಣ್ಣು ಮನೆಯತ್ತ ಜರಿಯುತ್ತಿದೆ.
![](https://www.suddi9.com/wp-content/uploads/2023/07/gur-july-25-gulab-sha-mane-3-650x293.jpg)
ಉಳಾಯಿಬೆಟ್ಟು ಮನೆಗೆ ಉರುಳಿದ ಬಂಡೆಗಳು…
ಎರಡು ತಿಂಗಳ ಹಿಂದೆಯಷ್ಟೇ ನಿರ್ಮಿಸಲಾದ ಉಳಾಯಿಬೆಟ್ಟಿನ ಗುಲಾಬ್ ಶಾ ಅವರ ಮನೆಯ ಹಿಂಭಾಗದಲ್ಲಿ ಬೃಹತ್ ಗುಡ್ಡ ಕುಸಿದಿದೆ. ಕೆಲವು ಬಂಡೆಗಳು ಉರುಳಿ ಮನೆಗೆ ಹಾನಿಯುಂಟಾಗಿದೆ. ಈ ಮನೆಯಲ್ಲಿ ಸುಮಾರು ೧೫ ಮಂದಿ ಇದ್ದು, ಅವರೆಲ್ಲ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಮನೆಯೊಳಗೆ ಕೆಸರು ಮಣ್ಣು ತುಂಬಿದೆ.
![](https://www.suddi9.com/wp-content/uploads/2023/07/6e40a9f3-335e-4ee2-8505-afe12b3bab6e-650x488.jpg)
ಗುಲಾಬ್ ಶಾ ಅವರ ಮನೆಗಳಿಗೆ ಭೇಟಿ ನೀಡಿದ ಗುರುಪುರ ನಾಡಕಚೇರಿ ಉಪತಹಶೀಲ್ದಾರ್ ಶಿವಪ್ರಸಾದ್, ಗ್ರಾಮ ಸಹಾಯಕಿ ರೇವತಿ, ಗ್ರಾಮ ಕರಣಿಕ(ವಿಎ) ಮೆಹಬೂಬ್ ಸ್ಥಳ ಪರಿಶೀಲನೆ ನಡೆಸಿ, ಮಳೆ ಹಾನಿ ಮತ್ತು ಪ್ರಕೃತಿ ವಿಕೋಪ ಅನುದಾನದಡಿ ಪರಿಹಾರ ನೀಡುವಂತೆ ಹಾಗೂ ಅಪಾಯದಲ್ಲಿರುವ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡುವಂತೆ ಮಂಗಳೂರು ತಾಲೂಕು ತಹಶೀಲ್ದಾರ್ ಅವರಿಗೆ ವರದಿ ಮಾಡುವೆ ಎಂದರು.
![](https://www.suddi9.com/wp-content/uploads/2023/07/938f5c91-a053-4eeb-a609-ec80bb09b994-650x488.jpg)
ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳ, ವಾಮಂಜೂರು ತಿರುವೈಲು ವಲಯ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಪಕ್ಷದ ಹಿರಿಯ ನಾಯಕರಾದ ಮಂಜುನಾಥ ಭಂಡಾರಿ, ಇನಾಯತ್ ಅಲಿ ಮತ್ತಿತರಿಗೆ ಕರೆ ಮಾಡಿ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ಸ್ಥಳಾಂತರಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದರು. “ಅಪಾಯದಲ್ಲಿರುವ ಎರಡೂ ಮನೆಯವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕು. ಇನ್ನಾದರೂ ಪಕ್ಷಬೇಧ ಮರೆತು ಸ್ಥಳೀಯ ಶಾಸಕರು ಮತ್ತು ಶಾಸಕರು ಇವರ ಬೇಡಿಕೆಗೆ ಸ್ಪಂದಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು” ಎಂದು ಸುರೇಂದ್ರ ಕಂಬಳಿ ಭರವಸೆ ನೀಡಿದರು.
ಉಳಾಯಿಬೆಟ್ಟು ಪಂಚಾಯತ್ ಸದಸ್ಯರಾದ ಮಮತಾ ಸನಿಲ್ ಮತ್ತು ಉಮರ್ ಫಾರೂಕ್ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.