ಡೀಸಿ ಆದೇಶ ಉಲ್ಲಂಘಿಸಿದ ಅಣಬೆ ಉತ್ಪಾದನಾ ಘಟಕ :
ಬೈಹುಲ್ಲು ಸಾಗಾಟದ ಲಾರಿಗೆ ಪ್ರತಿಭಟನಾಕಾರರಿಂದ ತಡೆ
ಕೈಕಂಬ : ವಾಮಂಜೂರು ಪರಿಸರದಲ್ಲಿ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯವರು ಭಾನುವಾರ ಆದೇಶ ನೀಡಿದ್ದರು, ಆದೇಶವನ್ನು ಉಲ್ಲಂಘಿಸಿ ಸೋಮವಾರ ಬೆಳಿಗ್ಗೆ ಘಟಕಕ್ಕೆ ಅಣಬೆ ಉತ್ಪಾದನೆಯ ಕಾಂಪೋಸ್ಟ್ಗೆ ಅಗತ್ಯವಿರುವ ಬೈಹುಲ್ಲು ಮತ್ತು ಇತರ ಸರಕು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಅಣಬೆ ಘಟಕದ ವಿರುದ್ಧ ಹೋರಾಟ ನಡೆಸುತ್ತಿರುವ ಸಮಿತಿ ಸದಸ್ಯರು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಣಬೆ ಫ್ಯಾಕ್ಟರಿಯೊಳಗಿರುವ ಕಾಂಪೋಸ್ಟ್ ಘಟಕದಿಂದ ದುರ್ವಾಸನೆ ಬೀರುತ್ತಿದೆ ಎಂದು ಸಾರ್ವಜನಿಕರ ದೂರಾಗಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಘಟಕ ಸ್ಥಗಿತಗೊಳಿಸಬೇಕು. ಉತ್ಪಾದನಾ ಹಂತದಲ್ಲಿರುವ ಅಣಬೆ ಕೃಷಿ ಮುಂದುವರಿಸಬಹುದು. ಘಟಕದಲ್ಲಿ ಅಣಬೆ ಉತ್ಪಾದನೆಗೆ ಹೊಸದಾಗಿ ಕಾಂಪೋಸ್ಟ್ ತಯಾರಿಸಬಾರದು ಎಂದು ಡೀಸಿಯವರು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ರಾತ್ರಿ ೧ ಗಂಟೆಯ ಸುಮಾರಿಗೆ ಅಣಬೆ ಘಟಕಕ್ಕೆ ಸರಕು ತುಂಬಿದ ಲಾರಿಯೊಂದು ಬಂದಿದ್ದು, ಈ ದೃಶ್ಯ ಸೀಸಿಟೀವಿ ಸೆರೆಯಾಗಿದೆ. ಸೋಮವಾರ ಬೆಳಿಗ್ಗೆ ಬೈಹುಲ್ಲು ಮತ್ತಿತರ ಸರಕು ತುಂಬಿದ ಘನ ವಾಹನವೊಂದು ಆಗಮಿಸಿದೆ. ಈ ವಿಷಯ ತಿಳಿಯುತ್ತಲೇ ಎಚ್ಚೆತ್ತುಕೊಂಡ ಹೋರಾಟ ಸಮಿತಿ ಸದಸ್ಯರು ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿ ಲಾರಿ ಮುಂದೆ ಸಾಗದಂತೆ ನೋಡಿಕೊಂಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿಯನ್ನು ಘಟಕದೊಳಗೆ ಕೊಂಡೊಯ್ಯಲು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ಆಸ್ಪದ ಕೊಟ್ಟಿಲ್ಲ. ಲಾರಿಯು ಈಗ ಮಂಗಳಜ್ಯೋತಿಯಲ್ಲಿ ನಿಂತಿದೆ.
“ಫ್ಯಾಕ್ಟರಿ ಮಾಲಕರು ಡೀಸಿ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ, ಪೊಲೀಸರು ಮಾತ್ರ ಕಾನೂನು ಉಲ್ಲಂಘಿಸಿದವರಿಗೆಯೇ ಬೆಂಬಲ ಮುಂದುವರಿಸಿದ್ದಾರೆ” ಎಂದು ಹೋರಾಟ ಸಮಿತಿಯ ಪದಾಧಿಕಾರಿಯೊಬ್ಬರು ಟೀಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಇತರ ಕೆಲವು ಜನಪ್ರತಿನಿಧಿಗಳು ಆಗಮಿಸಿ ಸಮಿತಿ ಸದಸ್ಯರಲ್ಲಿ ಧೈರ್ಯ ತುಂಬಿದ್ದಾರೆ.