ವೈಟ್‌ಗ್ರೋ ಅಣಬೆ ಫ್ಯಾಕ್ಟರಿ ವಿರುದ್ಧ ಮುಂದರಿದ ಮುಷ್ಕರ ; ಜಿಲ್ಲಾಡಳಿತ `ಡೋಂಟ್ ಕೇರ್’ !
ವಾಮಂಜೂರಿನಲ್ಲಿ ಉದ್ರಿಕ್ತ ವಾತಾವರಣ ; ಹೆಚ್ಚುವರಿ ಬಂದೋಬಸ್ತು
ಕೈಕಂಬ: ವಾಮಂಜೂರಿನ ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ' ಅಣಬೆ ಫ್ಯಾಕ್ಟರಿ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನ ತಲುಪಿದ್ದರೂ, ಪ್ರತಿಭಟನಾಕಾರ ಅಳಲು ಕೇಳುವಲ್ಲಿ ಜಿಲ್ಲಾಡಳಿತ
ಡೋಂಟ್ ಕೇರ್’ ನೀತಿ ಅನುಸರಿಸುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಮುಷ್ಕರನಿರತ ವಾಮಂಜೂರು ಮತ್ತು ಸುತ್ತಲ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಹೆಚ್ಚುವರಿ ಪೊಲೀಸ್ ಬಂದೀದೋಬಸ್ತು ವ್ಯವಸ್ಥೆಗೊಳಿಸಲಾಗಿದೆ.
ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದರೂ ಮಹಿಳೆಯರು ಮತ್ತು ಮಕ್ಕಳ ಸಹಿತ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಣಬೆ ಫ್ಯಾಕ್ಟಿç ಸಂಧಿಸುವ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿದ್ದರೆ, ಫ್ಯಾಕ್ಟರಿ ಸಂಪರ್ಕಿಸುವ ಒಳದಾರಿಗಳ ಮೇಲೆ ಜನರು ಹದ್ದಿನ ಕಣ್ಣಿಟ್ಟಿದ್ದಾರೆ. ಆದಾಗ್ಯೂ ಪೊಲೀಸರ ನೆರವಿನಿಂದ ಕಾರ್ಮಿಕರು ಕಳ್ಳದಾರಿಗಳಲ್ಲಿ ಕಂಪೌಂಡ್ ಗೋಡೆ ಹಾರಿ ಪ್ರವೇಶಿಸುತ್ತಿದ್ದು, ಫ್ಯಾಕ್ಟರಿ ಕೆಲಸ ಮುಂದುವರಿದಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಅಣಬೆ ಫ್ಯಾಕ್ಟರಿ ದುರ್ವಾಸನೆ ವಿರುದ್ಧ ಮುಷ್ಕರ ಮುಂದುವರಿಸಿರುವ ಮಂದಿಗೆ ಗುರುಪುರ, ಕೈಕಂಬ, ಕುಡುಪು, ಎಡಪದವು, ಮಳಲಿ, ಗಂಜಿಮಠ, ಕಂದಾವರ, ಪೊಳಲಿ ಮತ್ತಿತರ ಕಡೆಗಳ ಸಂಘ-ಸಂಸ್ಥೆಗಳು, ಬುದ್ಧಿಜೀವಿಗಳು ಮತ್ತು ನಾಗರಿಕರು ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಅಲ್ಲದೆ ಮುಷ್ಕರಕ್ಕೆ ಕುದ್ದಾಗಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಜಿಲ್ಲಾಡಳಿತದಿಂದ ನೆರವು
ಅಣಬೆ ಫ್ಯಾಕ್ಟರಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದ್ದರೂ, ಕೆಲವು ಒಳದಾರಿಗಳ ಮೂಲಕ ಪೊಲೀಸರೇ ಫ್ಯಾಕ್ಟರಿ ಕಾರ್ಮಿಕರನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದಾರೆ. ಪೊಲೀಸರ ನೆರವಿನೊಂದಿಗೆ ಫ್ಯಾಕ್ಟರಿಯೊಳಗೆ ಡೀಸೆಲ್, ಸೀಮೆಎಣ್ಣೆ ಮತ್ತು ಆಹಾರ ಸೊತ್ತು ಪೂರೈಕೆಯಾಗುತ್ತಿದ್ದು, ಇದರ ವೀಡಿಯೋ ಚಿತ್ರ ವೈರಲಾಗಿದೆ. ಪ್ರತಿಭಟನಾನಿರತರ ಬಗ್ಗೆ ಕಿಂಚಿತ್ತೂ ಕಾಳಜಿ ವ್ಯಕ್ತಪಡಿಸದ ಜಿಲ್ಲಾಡಳಿತ, ಫ್ಯಾಕ್ಟರಿ ಮಾಲಕರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವವರ ಕಷ್ಟ-ನೋವು ಪರಿಶೀಲಿಸುವ ನಿಟ್ಟಿನಲ್ಲಿ ಸ್ಥಳಕ್ಕಾಗಮಿಸಲು ಹಿಂದೇಟು ಹಾಕುತ್ತಿರುವ ಜಿಲ್ಲಾಧಿಕಾರಿಯವರು, ಯಾವುದೋ ಒತ್ತಡಕ್ಕೆ ಮಣಿದು ಅಣಬೆ ಫ್ಯಾಕ್ಟರಿ ಮಾಲಕರಿಗೆ ಬೆಂಬಲ ನೀಡುತ್ತಿದ್ದಾರೆಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದ್ದಾರೆ.
ಶಾಲಾ ಮಕ್ಕಳ ದೂರು :
ಅಣಬೆ ಫ್ಯಾಕ್ಟರಿಗಿಂತ ಅನತಿ ದೂರದ ಚೆಕ್‌ಪೋಸ್ಟ್ಗೆ ಹತ್ತಿರದ ತಿರುವೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು ತಾವು ಅನುಭವಿಸುತ್ತಿರುವ ತೀವ್ರ ತೆರನಾದ ಆರೋಗ್ಯ ಸಮಸ್ಯೆಗಳ ಕುರಿತು ಮಾಧ್ಯಮದೆದುರು ದೂರಿಕೊಂಡಿದ್ದಾರೆ.
“ಮಾರ್ಚ್ ವೇಳೆ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಫ್ಯಾಕ್ಟರಿಯಿಂದ ದುರ್ವಾಸನೆ ಬೀರುತ್ತಿದ್ದರೆ, ಕೆಲವು ದಿನಗಳ ಹಿಂದಿನಿಂದ ೧೨ ಗಂಟೆಗೆ ಗಬ್ಬು ವಾಸನೆ ಬರುತ್ತಿತ್ತು. ಇದರಿಂದ ಮಕ್ಕಳಿಗೆ ಪಾಠ ಹೇಳಿಕೊಡಲು ಕಷ್ಟವಾಗುತ್ತಿತ್ತು. ನಿರ್ದಿಷ್ಟ ಅವಧಿಯಲ್ಲಿ ತರಗತಿಯೊಳಗೆ ಶಾಲಾ ಮಕ್ಕಳು ಮಾಸ್ಕ್ ಧರಿಸುತ್ತಾರೆ, ಇಲ್ಲವೇ ಮೂಗಿಗೆ ಕರವಸ್ತ್ರ ಅಳವಡಿಸುತ್ತಾರೆ” ಎಂದು ಶಾಲಾ ಶಿಕ್ಷಕರು ಹೇಳಿದ್ದಾರೆ.
“ಫ್ಯಾಕ್ಟರಿಯಿಂದ ಹೊರಸೂಸುವ ಕೆಟ್ಟ ವಾಸನೆಯಿಂದ ತಲೆನೋವು, ತುರಿಕೆ ಉಂಟಾಗುತ್ತಿದೆ. ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಊಟ ಮಾಡಲು ಕಷ್ಟವಾದರೆ, ಸಂಜೆ ಆಟವಾಡಲು ಆಗುತ್ತಿಲ್ಲ. ದಯವಿಟ್ಟು, ಹೇಗಾದರೂ ಮಾಡಿ ಶಾಶ್ವತವಾಗಿ ಈ ದುರ್ವಾಸನೆ ನಿಲ್ಲಿಸಿ” ಎಂದು ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ನಾಯಕ ಸಂತೋಷ್ ಓಂಕಾರನಗರ ಹಾಗೂ ವಿದ್ಯಾರ್ಥಿನಿ ಅತಿಯಾ ನಾಝ್ ಆಶ್ರಯ ನಗರ ಹೇಳಿದ್ದಾರೆ.
“ಶಾಲಾ ಅವಧಿಯಲ್ಲಿ ದುರ್ವಾಸನೆ ಬೀರುತ್ತದೆ. ಕಳೆದ ಮೂರು ದಿನಗಳಿಂದ ದುರ್ವಾಸನೆ ನಿಂತು ಹೋಗಿದ್ದರೂ, ಮತ್ತೆ ದುರ್ವಾಸನೆ ಬೀರಿದರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಲಾ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಪಿಂಟೊ ಹೇಳಿದ್ದಾರೆ.