ವಾಮಂಜೂರು ಅಣಬೆ ಫ್ಯಾಕ್ಟರಿ ವಿರುದ್ಧ ಮುಂದರಿದ ಅಹೋರಾತ್ರಿ ಮುಷ್ಕರ
ಕೈಕಂಬ : ವಾಮಂಜೂರು ಆಶ್ರಯನಗರದಲ್ಲಿ ಪರಿಸರಕ್ಕೆ ದುರ್ವಾಸನೆ ಬೀರುತ್ತಲೇ ಜನರ ನಿದ್ದೆಗೆಡಿಸಿರುವ `ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ’ ಅಣಬೆ ಫ್ಯಾಕ್ಟರಿ ವಿರುದ್ಧ ಸ್ಥಳೀಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ೨ನೇ ದಿನಕ್ಕೆ ಕಾಲಿಟ್ಟಿದೆ.

ವಾಮಂಜೂರು ಚೆಕ್‌ಪೋಸ್ಟ್ ಬಳಿ, ಫ್ಯಾಕ್ಟರಿ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ `ವೈಟ್‌ಗ್ರೋ ಅಣಬೆ ಫ್ಯಾಕ್ಟರಿ ಹೋರಾಟ ಸಮಿತಿ’ ಜೂ. ೮ರಿಂದ ಮುಷ್ಕರ ಆರಂಭಿಸಿದೆ. ಗುರುವಾರ ವಾಮಂಜೂರು ಬಂದ್ ಆಗಿತ್ತು. ಕಳೆದ ರಾತ್ರಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಹಿತ ಪ್ರತಿಭಟನಾಕಾರರೆಲ್ಲರೂ ಸ್ಥಳದಲ್ಲೇ ನಿದ್ರಿಸಿ, ಬೆಳಿಗ್ಗೆ ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು. ಶುಕ್ರವಾರ ವ್ಯಾಪ್ತಿ ಪ್ರದೇಶದ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ, ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ನಡೆಸುತ್ತಿರುವ ಮಂದಿಗೆ ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಸ್ವಯಂ ಮುಷ್ಕರನಿರತರಲ್ಲಿ ಧೈರ್ಯ ತುಂಬಿದರು.

ಪ್ರತಿಭಟನಾನಿರತ ಆಶ್ರಯನಗರದ ನಿವಾಸಿ ಕರ್ಮಿನಾ ಲೋಬೊ ಅವರು ಫ್ಯಾಕ್ಟರಿ ದುಷ್ಪರಿಣಾಮಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. “ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆಯಿಂದ ನಾನು ಅನಾರೋಗ್ಯ ಪೀಡಿತಳಾಗಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ವೈದ್ಯಕೀಯ ದಾಖಲೆಗಳಿವೆ. ನಾವು ಈ ಪ್ರದೇಶದಲ್ಲಿ ವಾಸಿಸಬೇಕಿದ್ದರೆ, ಫ್ಯಾಕ್ಟರಿ ತೊಲಗಬೇಕು. ಇಲ್ಲವಾದಲ್ಲಿ ನಮಗೆಲ್ಲ ಸೂಕ್ತ ಪರಿಹಾರ ನೀಡಲಿ, ನಾವೇ ಬೇರೆಡೆಗೆ ಹೋಗುತ್ತೇವೆ” ಎಂದು ಶಾಸಕರ ಗಮಹರಿಸಿದರು.

ಸ್ಥಳೀಯ ನಿವಾಸಿಗರಾದ ಕಾವ್ಯಾ, ಸಾಮಾಜಿಕ ಕಾರ್ಯಕರ್ತೆ ಜಯಪ್ರದಾ, ಓಂಕಾರನಗರದ ಕ್ಯಾರೆನ್, ಜಯಂತಿ ಪೂಜಾರ್ತಿ ಮತ್ತಿತರರು ಮಾತನಾಡಿ ನಾವು ಬದುಕಬೇಕಿದ್ದರೆ, ಮೊತ್ತ ಮೊದಲಾಗಿ ಇಲ್ಲಿಂದ ಫ್ಯಾಕ್ಟರಿ ತೊಲಗಬೇಕು. ಕೆಮಿಕಲ್ ದುರ್ವಾಸನೆಯಿಂದ ಈಗಾಗಲೇ ಸಾಕಷ್ಟು ಮಂದಿ ಕೆಮ್ಮು, ಉಸಿರಾಟದ ತೊಂದರೆ, ಚರ್ಮರೋಗ ಹಾಗೂ ಇನ್ನಿತರ ಕಾಯಿಲೆಗಳಿಗೆ ತುತ್ತಾಗಿದ್ದಾರೆ.

ನಾವು ಫ್ಯಾಕ್ಟರಿ ವಿರುದ್ಧ ನಾವು ಕೈಗೊಂಡಿರುವ ಹೋರಾಟ ನಿಲ್ಲದು. ತಾಳ್ಮೆಗೂ ಒಂದು ಮಿತಿ ಇದೆ. ತಾಳ್ಮೆಯ ಕಟ್ಟೆಯೊಡೆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ. ಪರಿಸರ ಮತ್ತು ಟ್ರೇಡ್ ಸಂಬಂಧಿ ಅಧಿಕೃತ ಲೈಸೆನ್ಸ್ಗಳಿಲ್ಲದೆ, ಸರ್ಕಾರಿ ಜಾಗ ಅತಿಕ್ರಮಿಸಿ ವಿಸ್ತರಿಸಲಾದ ಫ್ಯಾಕ್ಟರಿ ತಕ್ಷಣ ಮುಚ್ಚಬೇಕು. ವಸತಿ ಪ್ರದೇಶದಲ್ಲಿರುವ ಫ್ಯಾಕ್ಟರಿಯ ಕಾರ್ಮಿಕರು ಪರಿಸರದಲ್ಲಿ ಅನೈತಿಕವಾಗಿ ವರ್ತಿಸುತ್ತಿದ್ದಾರೆ. ಸ್ಥಳಕ್ಕೆ ಡೀಸಿ ಬರಲಿ, ಸಮಸ್ಯೆಗೆ ಪರಿಹಾರ ನೀಡಲಿ” ಎಂದರು.

ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ವಾಮಂಜೂರಿನ ವರ್ತಕ ರಿಯಾಝ್ ಮಾತನಾಡಿ, ಅಣಬೆ ಫ್ಯಾಕ್ಟರಿಯಿಂದ ಹೊರಸೂಸುವ ಕೆಮಿಕಲ್‌ಯುಕ್ತ ದುರ್ವಾಸನೆಯಿಂದ ಜನರಲ್ಲಿ ಅಲರ್ಜಿ, ತಲೆನೋವು, ಚರ್ಮವ್ಯಾದಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಇನ್ನಿತರ ಮಾರಣಾಂತಿಕ ರೋಗಗಳು ಹರಡಿವೆ. ಕೆಲವು ಸಮಯದಿಂದ ಹೋರಾಟ ನಡೆಸುತ್ತಿದ್ದೇವೆ. ಹಲವು ಬಾರಿ ಕಾಲಾವಕಾಶ ಕೊಟ್ಟಿದ್ದೇವೆ. ಈ ಬಾರಿ ಕಾಲಾವಕಾಶ ನೀಡಲಾರೆವು. ದುರ್ವಾಸನೆ ತಡೆ ಅಸಾಧ್ಯವೆಂದಾದರೆ, ಫ್ಯಾಕ್ಟರಿ ಸ್ಥಳಾಂತರಿಸಲಿ. ಅಲ್ಲಿಯವರೆಗೆ ಫ್ಯಾಕ್ಟರಿ ಮುಚ್ಚಿಬಿಡಿ” ಎಂದರು.
ಮುಷ್ಕರ ಕುಳಿತ ಶಾಸಕ :
ಪ್ರತಿಭಟನಾಕಾರರನ್ನುದ್ದೇಶಿಸಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಫ್ಯಾಕ್ಟರಿ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿರುವ ನಿಮ್ಮೊಂದಿಗೆ ನಾನಿದ್ದೇನೆ. ಪರಿಹಾರ ಸಿಗುವವರೆಗೆ ಇಲ್ಲೇ, ಮುಷ್ಕರಲ್ಲಿ ಕುಳಿತುಕೊಳ್ಳುವೆ. ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ದುರ್ವಾಸನೆಯ ವಾಸ್ತವ ತಿಳಿದುಕೊಳ್ಳಬೇಕಿದ್ದರೆ, ಡೀಸಿ ಅಥವಾ ಜನನಾಯಕರು ಯಾರೇ ಇರಲಿ ಇಲ್ಲಿನ ಮನೆಗಳಲ್ಲಿ ಒಂದೆರಡು ರಾತ್ರಿ ಕಳೆಯಬೇಕು. ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ. ರಾಜಕೀಯ ಪ್ರವೇಶಿಸಿದರೆ ಸಂತ್ರಸ್ತರಿಗೆ ನ್ಯಾಯ ವಿಳಂಬವಾಗಬಹುದು. ತಾಳ್ಮೆ, ಶಾಂತಿಯಿಂದಲೇ ಮುಂದುವರಿಯುವ ಪ್ರತಿಭಟನೆಗೂ ಒಂದು ಮಿತಿ ಎಂಬುದಿರುತ್ತದೆ. ಅದು ಜಿಲ್ಲಾಡಳಿತ, ಸರ್ಕಾರಗಳಿಗೆ ಗೊತ್ತಿದೆ. ಹಾಗಾಗಿ ಪರಿಸ್ಥಿತಿ ಹದಗೆಡುವ ಮುಂಚಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದರು.
ಹೋರಾಟದಲ್ಲಿ ಸರ್ವ ಪಕ್ಷಗಳ ಪ್ರತಿನಿಧಿಗಳಿದ್ದಾರೆ. ಪ್ರತಿಯೊಬ್ಬರು ತಮ್ಮ ನಾಯಕರಿಗೆ ಫ್ಯಾಕ್ಟರಿ ದುರ್ವಾಸನೆಯ ವಾಸ್ತವ ಅರಿವು ಮಾಡಿ, ಜನರಿಗೆ ನ್ಯಾಯ ಕೊಡಿಸಲು ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂಬ ಸಲಹೆಯೊಂದು ವ್ಯಕ್ತವಾಯಿತು.

ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಹೋರಾಟ ಸಮಿತಿಯ ಪದಾಧಿಕಾರಿಗಳಾದ ಓಂಪ್ರಕಾಶ್ ಶೆಟ್ಟಿ, ರಿಯಾಜ್ ವಾಮಂಜೂರು, ಲಕ್ಷ್ಮಣ್ ಶೆಟ್ಟಿಗಾರ, ರಾಜೇಶ್ ಕೊಟ್ಟಾರಿ, ಜಯರಾಮ ಕೊಟ್ಟಾರಿ, ಅಬ್ದುಲ್ ರಜಾಕ್, ಅಡ್ವಕೇಟ್ ಮನೋಜ್, ಲಿಂಗಪ್ಪ ಸಾಲ್ಯಾನ್, ಚಾರ್ಲಿ ಸಾಲಿನ್ಸ್, ರಿಯಾಝ್ ಆಶ್ರಯನಗರ, ಉಮರಬ್ಬ, ವಾಮಂಜೂರು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಉದ್ಯಮಿ ರಘು ಸಾಲ್ಯಾನ್, ಸ್ಟ್ಯಾನಿ ಕುಟಿನೊ, ಉಮೇಶ್ ಕೋಟ್ಯಾನ್ ಹಾಗೂ ಆಶ್ರಯನಗರ, ಓಂಕಾರನಗರ, ತಿರುವೈಲು ವಾರ್ಡ್ ಮತ್ತಿತರ ಪ್ರದೇಶಗಳ ನೂರಾರು ಮಹಿಳೆಯರು, ಮಕ್ಕಳು, ವಯೋವೃದ್ಧರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.