ಗುರುಪುರ ಸರ್ಕಾರಿ ಶಾಲೆಯಲ್ಲಿ `ಪ್ರಾರಂಭೋತ್ಸವ’
ಕೈಕಂಬ : ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಬುಧವಾರ ವಿಜೃಂಬಣೆಯಿಂದ ಶಾಲಾ ಪ್ರಾರಂಭೋತ್ಸವ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, ವರ್ಷಗಳ ಹಿಂದೆ ಗುರುಪುರ ನಡುಗಡ್ಡೆಯಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗುರುಪುರ ಸರ್ಕಾರಿ ಕಾಲೇಜಿನ ಪ್ರಾಂಗಣದೊಳಗೆ ಕಾಯಕಲ್ಪ ನೀಡುವಲ್ಲಿ ಶ್ರಮಿಸಿದ ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಜಿ. ಎಂ. ಉದಯ ಭಟ್ ಅವರೊಂದಿಗೆ ನಾವೆಲ್ಲ ಸೇರಿ ಕೆಲಸ ಮಾಡಿದ್ದೇವೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಲ್ಲಿ ೧ರಿಂದ ದ್ವಿತೀಯ ಪಿಯುಸಿವರೆಗೆ ಕಲಿಯುವ ಅವಕಾಶವಿದೆ. ನಾನು ಕೂಡ ಇಲ್ಲಿಯೇ ಕಲಿತಿದ್ದು, ಶಾಲೆಯಲ್ಲಿ ಲಭ್ಯವಿರುವ ಸರ್ಕಾರಿ ಕೊಡುಗೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಪ್ರಾಥಮಿಕ ಶಾಲಾ ತರಗತಿಗಳ ಕಟ್ಟಡ ನಿರ್ಮಾಣಕ್ಕೆ ೫೦ ಲಕ್ಷ ರೂ ದೇಣಿಗೆ ನೀಡಿದ ಗುರುಪುರದ ಮಧುಸೂದನ್ ಪೈ ಅವರ ಶಿಕ್ಷಣದ ಮೇಲಿನ ಪ್ರೀತಿ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದ ಶೆಟ್ಟಿ, ಈ ಬಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಲಿದೆ ಎಂದರು.
ಕಾಲೇಜು ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ, ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ, ಬಾಲಕೃಷ್ಣ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬು ಪ್ರಸ್ತಾವಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ವಂದಿಸಿದರು.