ಕಿನ್ನಿಕಂಬಳ ರೋಸಾ ಮಿಸ್ತಿಕಾ ಶಾಲೆ ಆರಂಭೋತ್ಸವ
ಕೈಕಂಬ : ಗುರುಪುರ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ದಿನಚರಿಯ ಆರಂಭೋತ್ಸವ ಹಾಗೂ ಶೇ. ೧೦೦ ಫಲಿತಾಂಶ ತಂದು ಕೊಟ್ಟ ರೋಸಾ ಮಿಸ್ತಿಕಾ ಕನ್ನಡದ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಗ್ರೇಸಿ ಮೊನಿಕಾ ಮಾತನಾಡಿ, ಶಾಲೆಗೆ ಶೇ. ೧೦೦ ಫಲಿತಾಂಶ ತಂದುಕೊಟ್ಟ ೧೦ನೇ ತರಗತಿ ವಿದ್ಯಾರ್ಥಿಗಳನ್ನು ಅಭಿನಂದಿಸಿದಾಗ ತಾನೇ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ ಹೊಂದಿದಷ್ಟು ಖುಷಿಯಾಯಿತು. ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವರ್ಗ ಮತ್ತು ಪಾಲಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಪ್ರತಿಭೆಯ ಸರಿಯಾದ ನಿರ್ವಹಣೆಯಾದಲ್ಲಿ ಎಲ್ಲರಿಗೂ ಯಶಸ್ಸು ನಿಶ್ಚಿತ. ೬೫ ವರ್ಷಗಳ ಶಾಲಾ ಇತಿಹಾಸದಲ್ಲಿ ೪೦ ವರ್ಷದ ಹಿಂದೊಮ್ಮೆ ಶೇ. ೧೦೦ ಫಲಿತಾಂಶ ಬಂದಿತ್ತು ಎಂದರು.

ರೋಸಾ ಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್ ಹಾಗೂ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಸಿಸ್ಟರ್ ಲೀರಾ ಮರಿಯಾ, ಬದ್ರಿಯಾನಗರ ಸಿಆರ್‌ಪಿ ಶೀಲಾವತಿ ವಿದ್ಯಾರ್ಥಿಗಳಿಗೆ ಹಿತವಚನ ತಿಳಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ೫೯೨ ಅಂಕ ಗಳಿಸಿದ ವಿವಿಟಾ ಲೋಬೊ ಶಾಲಾ ಅನುಭವ ವಿವರಿಸಿದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ತಾವ್ರೊ, ಪಿಲಿಕುಳ ಮಾನಸ ಅಮ್ಯೂಸ್‌ಮೆಂಟ್‌ನ ಅಧ್ಯಕ್ಷ ಎವ್ಝಿನ್ ವಿಲ್ಫೆçಡ್ ಪಿಂಟೊ, ಸಿಸ್ಟರ್ ಕನ್ಸೆಟ್ಟಾ, ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಮೆಲ್ವಿನ್ ಸಲ್ಡಾನ, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ಸವಿತಾ, ಶಿಕ್ಷಕ ರಕ್ಷಕ ಸಂಘದ ಉಷಾ ಮತ್ತಿತರರು ಇದ್ದರು.
ರೋಸಾ ಮಿಸ್ತಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ. ಸಿಸ್ಟರ್ ಲೊಲಿಟಾ ಪ್ರೇಮಾ ಪಿರೇರ ಸ್ವಾಗತಿಸಿದರು. ಶಿಕ್ಷಕಿ ಸಬಿನಾ ಕ್ರಾಸ್ತಾ ನಿರೂಪಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರ ವಂದಿಸಿದರು. ರೋಸಾ ಮಿಸ್ತಿಕಾ ಶಾಲೆಯಲ್ಲಿ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು ೧೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆ ಹೊಂದಿದ್ದಾರೆ.
ವಿಶೇಷ ಪ್ರಾರ್ಥನೆ :
ಪ್ರಾರ್ಥನೆಯ ಸಂದರ್ಭದಲ್ಲಿ ಧರ್ಮಗ್ರಂಥಗಳ ಪಠಣ ಮಾಡಿದರು. ಜೊತೆಗೆ ಸಾಂಕೇತಿಕವಾಗಿ ಶಿಕ್ಷಣಕ್ಕೆ ಪೂರಕವೆನಿಸಿದ ಬೆಳಕು(ಜ್ಞಾನದೀಪ), ಗಡಿಯಾರ(ಸಮಯ), ಹೂವು(ಗುಣ), ಗಿಡ(ಪರಿಸರ), ಮನೆ(ವಾಸ್ತವ್ಯ) ಮತ್ತು ಪುಸ್ತಕ(ಜ್ಞಾನ ಭಂಡಾರ) ಕೈಯಲ್ಲಿ ಹಿಡಿದುಕೊಂಡ ವಿದ್ಯಾರ್ಥಿಗಳು ಇವೆಲ್ಲದರ ಗುಣ ಮೈಗೂಡಿಸಿಕೊಂಡು ಬೆಳೆಯೋಣ ಎಂದು ಪ್ರಾರ್ಥಿಸಿದರು.