ಉಳಾಯಿಬೆಟ್ಟು : ಶಾಲಾ ಮಕ್ಕಳಿಗೆಉಚಿತ ಬರೆಯುವ ಪುಸ್ತಕ ವಿತರಣೆ
ಕೈಕಂಬ : ಉಳಾಯಿಬೆಟ್ಟಿನ ಶ್ರೀ ಮಾಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್(ರಿ) ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ಆಶ್ರಯದಲ್ಲಿ ದಿ. ದಾಮೋದರ ಶೆಟ್ಟಿ ಕಡಂಬಿಲಗುತ್ತು, ದಿ. ಹೇಮಾವತಿ ದಾಮೋದರ ಶೆಟ್ಟಿ ಸಾಲೆಮನೆ, ದಿ. ಸುಮತಿ ಶೆಟ್ಟಿ ಕಡಂಬಿಲಗುತ್ತು ಇವರ ಸ್ಮರಣಾರ್ಥ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮೇ. ೨೮ರಂದು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಂಗಮ ಲಯನ್ಸ್ ಜಿಲ್ಲೆ ೩೧೭ಡಿ ಜಿಲ್ಲಾ ಸಂಚಾಲಕ ಮೋಹನದಾಸ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇದರ ಮಾಜಿ ಅಧ್ಯಕ್ಷ ಹಾಗೂ ಈ ಕಾರ್ಯಕ್ರಮದ ರೂವಾರಿ ದಯಾನಂದ ಶೆಟ್ಟಿ ಕದ್ರಿ ಪುಸ್ತಕ ಸ್ವೀಕರಿಸಿದ ಎಲ್ಲ ಮಕ್ಕಳಿಗೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇದರ ಅಧ್ಯಕ್ಷ ವಿಕ್ಟರ್ ಮೊರಾಸ್, ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಕಮಲಾಕ್ಷ ತಲ್ಲಿಮಾರ್, ಭಜನಾ ಸೇವಾ ಸಮಿತಿ ಅಧ್ಯಕ್ಷ ಮುಕೇಶ್, ಮಹಿಳಾ ಮಂಡಳಿ ಅಧ್ಯಕ್ಷೆ ಮೇಘಾ, ಕ್ಲಬ್ ಅಧ್ಯಕ್ಷ ಶ್ರೀಧರ ತಲ್ಲಿಮಾರ್ ಉಪಸ್ಥಿತರಿದ್ದರು.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು. ಸುಮಾರು ೭೫ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು. ದಿನೇಶ್ ತಲ್ಲಿಮಾರ್ ಸ್ವಾಗತಿಸಿದರು. ಜಯರಾಮ ರೈ ಉಳಾಯಿಬೆಟ್ಟು ನಿರೂಪಿಸಿದರೆ, ಶ್ರೀಧರ್ ತಲ್ಲಿಮಾರ್ ವಂದಿಸಿದರು.