ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗ ಕಸಿದ ಸರ್ಕಾರ,
ಗ್ಯಾರಂಟಿ’ಗಾಗಿ ಹೆಣಗಾಡುತ್ತಿರುವ ಕಾಂಗ್ರೆಸ್‌ನಿಂದ
ದ್ವೇಷ ರಾಜಕಾರಣ : ಡಾ. ಭರತ್ ಶೆಟ್ಟಿ ಆಕ್ರೋಶ
ಕೈಕಂಬ : ಮತದಾರರಿಗೆ ಗ್ಯಾರಂಟಿಗಳ ಆಶ್ವಾಸನೆ ನೀಡಿ, ಅವುಗಳ ಅನುಷ್ಠಾನಕ್ಕಾಗಿ ಹೆಣಗಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ಇದೀಗ ಬಿಜೆಪಿ ವಿರುದ್ಧ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ. ಸುಳ್ಳಿನ ಬುನಾದಿಯಡಿ ಸರ್ಕಾರ ರಚಿಸಿರುವ ಕಾಂಗ್ರೆಸ್‌ಗೆ ದ್ವೇಷ ರಾಜಕಾರಣ ಮತ್ತು `ಗ್ಯಾರಂಟಿ’ ವಿಷಮ ಕಾಲವಾಗಿ ಪರಿಣಮಿಸುವುದು ಗ್ಯಾರಂಟಿ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಎಚ್ಚರಿಸಿದರು.

ದ್ವೇಷ ರಾಜಕಾರಣಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಪ್ರವೀಣ್ ನೆಟ್ಟಾರು ಅವರು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಳಿಕ ಅವರ ಪತ್ನಿ ನೂತನ ಕುಮಾರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನವೀಯ ನೆಲೆಯಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಉದ್ಯೋಗವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದು ಖಂಡನೀಯ ಎಂದ ಡಾ. ಭರತ್ ಶೆಟ್ಟಿ, ಮುಖ್ಯಮಂತ್ರಿಗಳು ನೂತನ ಕುಮಾರಿ ಅವರಿಗೆ ತಕ್ಷಣ ಉದ್ಯೋಗದ ಮರು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ, ಬಿಜೆಪಿ ಕಾರ್ಯಕರ್ತರು ಹಿಂದೂತ್ವಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅವರ ಮೇಲೆ ದೌರ್ಜನ್ಯ ಆರಂಭಿಸಿದೆ. ಹಲವೆಡೆ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಅವರ ಮೇಲೆ ದುರುದ್ದೇಶಪೂರಿತ ಕೇಸು ದಾಖಲಾಗಿದೆ ಎಂದರು.
ಜನರಿಗೆ ಚುನಾವಣೆಗೆ ಮುನ್ನ ನೀಡಿರುವ ಗ್ಯಾರಂಟಿ ಆಶ್ವಾಸನೆ ಪೂರೈಸಲು ಒದ್ದಾಡುತ್ತಿರುವ ಕಾಂಗ್ರೆಸ್, ಜನರ ಗಮನ ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ವಿರುದ್ಧ ಹಗೆತನ ಸಾಧಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡಾ. ಭರತ್ ಶೆಟ್ಟಿ, ಆರೆಸ್ಸೆಸ್, ಬಜರಂಗ ದಳ ಸಹಿತ ಹಿಂದೂ ಸಂಘಟನೆಗಳ ಪರವಾಗಿ ಕೆಲಸ ಮಾಡುವ ಸಂಘಟನೆಗಳು ಅಥವಾ ವ್ಯಕ್ತಿಗಳನ್ನು ಗುರಿಯಾಗಿಸಿ ಯಾವುದೇ ಕ್ರಮ ಕೈಗೊಂಡರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲಿದ್ದು, ಇಂತಹ ಸನ್ನಿವೇಶಗಳಿಗೆ ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನ ಕಾರಣವಾಗಲಿದೆ ಎಂದು ಎಚ್ಚರಿಸಿದರು.