ಗುರುಪುರ ಮಠದಗುಡ್ಡೆ ಸೈಟ್ ತ್ಯಾಜ್ಯ ತೆರವು
ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆ ಸೈಟ್ ಪ್ರದೇಶದಲ್ಲಿರುವ ಒಳರಸ್ತೆಯ ಸುಮಾರು ಒಂದು ಕಿಮೀ ಅಂತರದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ತುಂಬಿದ್ದ ಭಾರೀ ತ್ಯಾಜ್ಯವನ್ನು ಪಂಚಾಯತ್ ಆಡಳಿತ ಶುಕ್ರವಾರ ಸಂಪೂರ್ಣ ತೆರವುಗೊಳಿಸಿತು.
ಈ ರಸ್ತೆಯ ಒಂದು ಪಾರ್ಶ್ವದಲ್ಲಿ ಗುಡ್ಡವಿದ್ದರೆ, ಮತ್ತೊಂದು ಪಾರ್ಶ್ವದಲ್ಲಿ ಕಾಡು ಬೆಳೆದಿದೆ. ರಾತ್ರಿ ವೇಳೆ ಇಲ್ಲಿ ವಾಹನಗಳಲ್ಲಿ ಸಂಚರಿಸುವುದು ಅಪಾಯಕಾರಿ. ಇದೇ ಕಾರಣದಿಂದ, ಬೇರೆಡೆಯ ಕೆಲವು ವಾಹನಿಗರು ಭಾರೀ ತ್ಯಾಜ್ಯ ಎಸೆದು ಹೋಗುತ್ತಾರೆ. ತ್ಯಾಜ್ಯ ತಂದು ಎಸೆಯುವವರ ಬಗ್ಗೆ ಪ್ರಶ್ನಿಸಿದರೆ, ಅಪಾಯ ತಪ್ಪಿದಲ್ಲ. ಹಾಗಾಗಿ ಪ್ರತಿ ಬಾರಿಯೂ ಈ ರಸ್ತೆಯುದ್ದಕ್ಕೂ ಒಣ-ಹಸಿ ತ್ಯಾಜ್ಯ ತುಂಬಿರುತ್ತದೆ. ದನ, ನಾಯಿಗಳು ಕಸದ ರಾಶಿಯಲ್ಲಿರುತ್ತವೆ. ದಿನದ ೨೪ ತಾಸೂ ದುರ್ವಾಸನೆ ಬೀರುತ್ತದೆ. ಕೆಲವು ಸ್ಥಳೀಯರೂ ಇಲ್ಲಿ ಕಸ ಎಸೆಯುವುದು ರೂಢಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.
ಮೂರು ತಿಂಗಳ ಹಿಂದೆ ಈ ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ ಅದುವರೆಗಿನ ತ್ಯಾಜ್ಯ ಸುಟ್ಟು ಕರಕಲಾಗಿತ್ತು. ಜೊತೆಗೆ ಪರಿಸರದಲ್ಲಿದ್ದ ಕಾಡಿನ ಮರಗಿಡಗಳೂ ಸುಟ್ಟು ಹೋಗಿದ್ದವು. ಬಳಿಕ ಯಥಾಪ್ರಕಾರ ರಾಶಿಗಟ್ಟಲೆ ತ್ಯಾಜ್ಯ ಜಮೆಯಾಗಿದ್ದು, ಎಲ್ಲೆಡೆ ದುರ್ನಾತ ಬೀರುತ್ತಿತ್ತು. ಇಲ್ಲಿ ರಾತ್ರಿ ವೇಳೆ ವಾಹನಗಳಲ್ಲಿ ಸಾಗುವ ಮಂದಿ ಹಾಗೂ ಸ್ಥಳೀಯರು ತಾಜ್ಯ ಎಸೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಕೆಲವರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ಅವರಿಗೆ ದೂರು ನೀಡಿದ್ದಾರೆ.
ಗುರುಪುರ ಪಂಚಾಯತ್ ಪಿಡಿಒ ಪಂಕಜಾ ಶೆಟ್ಟಿ, ಅಧ್ಯಕ್ಷ ಯಶವಂತ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸ್ಥಳೀಯ ವಾರ್ಡ್ ಸದಸ್ಯ ರಾಜೇಶ್ ಸುವರ್ಣ ಅವರು ಶುಕ್ರವಾರ ಸಂಜೆ ಜೆಸಿಬಿ ಬಳಸಿ ತ್ಯಾಜ್ಯ ತೆರವುಗೊಳಿಸಿದರು.
ಪಿಡಿಒ ಪಂಕಜಾ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ಇಂತಹ ತೀರಾ ಒಳರಸ್ತೆಗಳಲ್ಲಿ ಸಿಸಿಟೀವಿ ಅಳವಡಿಸಿದರೆ, ಅವುಗಳ ನಿರ್ವಹಣೆ ಕಷ್ಟವಾಗಬಹುದು. ಬೇರೆ ಕಡೆಯವರು ಅಥವಾ ವಾಹನಿಗರು ರಾತ್ರಿ ವೇಳೆ ಒಣ ಮತ್ತು ಹಸಿ ತ್ಯಾಜ್ಯ ಎಸೆಯುತ್ತಾರೆ. ದುರ್ನಾತ ಬೀರುತ್ತಿರುವುದು ಸತ್ಯ.
ಪಂಚಾಯತ್‌ಗೆ ದೂರುಗಳು ಬಂದ ತಕ್ಷಣ ತಾನು ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರ ಗಮನಹರಿಸಿ ತ್ಯಾಜ್ಯ ವಿಲೇವಾರಿ ಬಗ್ಗೆ ಮಾತುಕತೆ ನಡೆಸಿದ್ದೇನೆ. ಜನರು ಪರಿಸರದ ಮೇಲಿನ ಕಾಳಜಿ ಬಗ್ಗೆ ಸ್ವಯಂ ಅರಿವು ಬೆಳೆಸಿಕೊಂಡಲ್ಲಿ ಇಂತಹ ಸಮಸ್ಯೆಗಳು ಅವಕಾಶವಿರದು. ತ್ಯಾಜ್ಯ ಎಸೆಯುವವರ ಪೋಟೊ ತೆಗೆದು ಪಂಚಾಯತ್‌ಗೆ ಕಳುಹಿಸಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಸಾಧ್ಯವಾಗಬಹುದು ಎಂದರು.