ಶ್ರೀ ಕ್ಷೇತ್ರ ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ
ಕೈಕಂಬ: ಜೀರ್ಣೋದ್ಧಾರ ಹಂತದಲ್ಲಿರುವ ಮಂಗಳೂರು ತಾಲೂಕು ಕಂದಾವರ ಗ್ರಾಮದ ಶ್ರೀ ಕ್ಷೇತ್ರ ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಎ. ೨೯ರಿಂದ ಮೇ. ೮ರವರೆಗೆ ನಡೆಯಲಿರುವ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಬ್ರಹ್ಮಮಂಡಲೋತ್ಸವ(ಢಕ್ಕೆ ಬಲಿ) ಹಿನ್ನೆಲೆಯಲ್ಲಿ ಎ.೨ರಂದು ಭಾನುವಾರ ದೇವಸ್ಥಾನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
![](https://www.suddi9.com/wp-content/uploads/2023/04/2-vp-vasuki-650x433.jpg)
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀಧರ ಆಳ್ವ ಕಂದಾವರ ಬಾಳಿಕೆ ಅವರು ಮಾತನಾಡಿ, ಸುಮಾರು ೧,೨೦೦ ವರ್ಷಗಳಷ್ಟು ಹಿಂದಿನ ಇತಿಹಾಸವುಳ್ಳ ಈ ಸಾನಿಧ್ಯದಲ್ಲಿ ಹಿಂದೆ ನಾಗಾರಾಧನೆಯ ವಿಶಿಷ್ಟ ಪುಣ್ಯ ಕೆಲಸಗಳು ನಡೆದಿವೆ. ಮಕ್ಕಳಾಗದ ದಂಪತಿಗಳು ಈ ಸಾನಿಧ್ಯ ದೇವರ ಪ್ರಾರ್ಥಿಸಿಕೊಂಡಂತೆ ಸಂತಾನಪ್ರಾಪ್ತಿಯಾಗಿರುವ ನಿದರ್ಶನಗಳಿವೆ. ಆದ್ದರಿಂದ ಇದು ಸಂತಾನಪ್ರಾಪ್ತಿ, ಭಕ್ತರ ಕಷ್ಟ, ರೋಗರುಜಿನಗಳ ಮುಕ್ತಿ ದೇವಾಲಯವಾಗಿದೆ ಎಂದರು.
![](https://www.suddi9.com/wp-content/uploads/2023/04/1vp-vasuki1-650x433.jpg)
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್. ಮುರಳೀಧರ ಶೆಟ್ಟಿ ನಂದಬೆಟ್ಟು ಮಾತನಾಡಿ, ಕರೊನಾ ಮಹಾಮಾರಿಯಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವಿಳಂಬಗೊಂಡಿದ್ದರೂ, ಅಂದಾಜು ೪ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಈ ದೇವಾಲಯದಲ್ಲಿ ಈಗ ಶೇ ೯೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.
![](https://www.suddi9.com/wp-content/uploads/2023/04/2ವಿಪಿ-ವಾಸುಕಿ-650x433.jpg)
ಕಾರ್ಯಾಧ್ಯಕ್ಷ ವೀರೇಂದ್ರ ಶೆಟ್ಟಿ ಕಂದಾವರ, ರಮಾನಾಥ ಅತ್ತಾರ್(ಚಿತ್ತಣ್ಣ), ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಆಳ್ವ ಪಾವೂರುಗುತ್ತು ಕಂದಾವರ ಬಾಳಿಕೆ, ಯಶವಂತ ಆಳ್ವ ಗುರುಪುರ, ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಭಟ್ ಮಾತನಾಡಿದರು. ರವಿರಾಜ ಶೆಟ್ಟಿ ನಿಟ್ಟೆಗುತ್ತು,
ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ , ದಿನೇಶ್ ಆಳ್ವ ಪಾವೂರು ಗುತ್ತು , ಶ್ರೀಧರ್ ಆಳ್ವ ಕಂದಾವರ , ಲಕ್ಷ್ಮೀನಾರಾಯಣ ಉಡುಪ ,ಸಿ ಎ ಗಣೇಶ್ ರಾವ್ ,ಭಾಸ್ಕರ್ ಭಟ್ ,ರಾಮಚಂದ್ರ ಶಬರಾಯ ,ಕೊರಗ ಆಳ್ವ ಮೋನಪ್ಪ ಮೇಸ್ತ್ರಿ ,ಬಿಬಿಲಚ್ಚಿಲ್ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪಧಾಧಿಕಾರಿಗಳು ಮಹಿಳಾ ಸಮಿತಿ ,ವಾಸುಕೀ ಸೇವಾ ಸಮಿತಿ
ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಮಾಣೈ ಸ್ವಾಗತಿಸಿದರೆ, ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕಲಶಾಭಿಷೇಕ…
ಸಂಪೂರ್ಣ ಶಿಲಾಮಯ ದೇವಾಲಯದಲ್ಲಿ ಮೇ. ೨೯ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮೇ. ೪ರಂದು ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವರ ಪುನರ್ ಪ್ರತಿಷ್ಠೆ, ಮೇ. ೭ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ಸಂಜೆ ೬ಕ್ಕೆ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಶ್ರೀಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗದವರ ಸಹಭಾಗಿತ್ವದಲ್ಲಿ ಬ್ರಹ್ಮಮಂಡಲೋತ್ಸವ(ಢಕ್ಕೆ ಬಲಿ) ನಡೆಯಲಿದೆ.