Published On: Sun, Apr 2nd, 2023

ಗುರುಪುರ ಮಠದಬೈಲು ಶ್ರೀ ಕಟೀಲು ಯಕ್ಷಗಾನ ಸೇವಾ ಸಮಿತಿ ರಜತ ಸಂಭ್ರಮದಲ್ಲಿ ಆಶೀರ್ವಚನ

ಯಕ್ಷಗಾನದಿಂದ ಧರ್ಮ ಪ್ರಜ್ಞೆ : ಶ್ರೀ ವಜ್ರದೇಹಿ ಸ್ವಾಮೀಜಿ

ಕೈಕಂಬ: ಕಲೆ ಸಾಕಾರಗೊಳಿಸುವ ಗುಣ ಯಕ್ಷಗಾನದಲ್ಲಿದೆ. ಯಕ್ಷಗಾನ ಅಥವಾ ಅದರ ಕತೆಯು ವ್ಯಕ್ತಿಯಲ್ಲಿ ಧರ್ಮ ಪ್ರಜ್ಞೆ ಹುಟ್ಟಿಸಿ, ಧರ್ಮದ ಹಾದಿಯಲ್ಲಿ ನನಡೆಯುವಂತೆ ಮಾಡುತ್ತದೆ. ಯಕ್ಷಗಾನದಲ್ಲಿದ್ದ ಜಾತ್ಯತೀತ ಧರ್ಮ ಈಗ ದೂರವಾಗಿರುವುದು ಬೇಸರದ ಸಂಗತಿ. ಇಲ್ಲಿನ ಹತ್ತು ಸಮಸ್ತರ ಯಕ್ಷಗಾನ ನಿರಂತರವಾಗಲಿ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹಾರೈಸಿದರು.

ಗುರುಪುರ ಮಠದಬೈಲಿನಲ್ಲಿ ಶ್ರೀ ಕಟೀಲು ಯಕ್ಷಗಾನ ಸೇವಾ ಸಮಿತಿ ವತಿಯಿಂದ ಕಟೀಲು ಮೇಳದ ೨೫ನೇ ವರ್ಷದ `ರಜತ ಸಂಭ್ರಮ’ ಸಾಂಸ್ಕೃತಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವೇದಮೂರ್ತಿ ವಿದ್ವಾನ್ ಶ್ರೀ ರಾಜೇಶ್ ಭಟ್ ಮುಂಬೈ ಮಾತನಾಡಿ, ಯಾರು ಏನೇ ಸಹಾಯ ಮಾಡಲಿ, ಅದು ತಾನು ಮಾಡಿದೆ ಎಂಬ ಭಾವ(ಅಹಂ) ಅವರಲ್ಲಿರಬಾರದು. ಎಲ್ಲವೂ ದೈವೇಚ್ಛೆಯಾಗಿರುತ್ತದೆ. ದೇವರು ನಮ್ಮಿಂದ ಮಾಡಿಸುತ್ತಾರೆ. ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕು ಎಂದರು.

ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇದು ಧರ್ಮದ ಕಾರ್ಯಕ್ರಮ. ಧರ್ಮದ ನೆಲೆಯಲ್ಲಿ, ಒಗ್ಗೂಡಿ ಮಾಡುವಂತಹ ಕೆಲಸಗಳು ಯುವಜನರಿಗೆ ಸ್ಫೂರ್ತಿಯಾಗಲಿ. ನಮ್ಮ ಧರ್ಮದ ರಕ್ಷಣೆ ನಮಗೆ ಮುಖ್ಯವಾಗಿದೆಯೇ ಹೊರತು, ಇನ್ನೊಂದು ಧರ್ಮದ ಅವಹೇಳನ ಮಾಡಕೂಡದು. ವ್ಯಕ್ತಿ ಮಾಡುವ ತಪ್ಪಿಗೆ ಧರ್ಮ ಸಿದ್ಧಾಂತದ ಮೇಲಿನ ದೂಷಣೆ ಸಮಂಜಸವಲ್ಲ ಎಂದರು.

ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ, ಉದ್ಯಮಿ ಬಿ. ಎಲ್. ಪದ್ಮನಾಭ ಮಾತನಾಡಿ, ಸಾಮಾಜಿಕ ಪರಿವರ್ತನೆಯಲ್ಲಿ ಇಂತಹ ಸಂಘಟಿತ ಕಾರ್ಯಕ್ರಮಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದರು.

ಶ್ರೀ ರಾಜೇಶ್ ಭಟ್ ಮುಂಬೈ, ಯಕ್ಷಗಾನ ಕಲಾವಿದ ಸುರೇಂದ್ರ ಮಲ್ಲಿ ಹಾಗೂ ಯಕ್ಷಗಾನ ಸಂಘಟಕ ದಿ. ಮಹಾಬಲ ಪೂಜಾರಿ ಸ್ಮರಣಾರ್ಥ ಅವರ ಪತ್ನಿ ಜಯಂತಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಧನಂಜಯ ಗುರುಪುರ ಸನ್ಮಾನ ಪತ್ರ ಓದಿದರು. ಸ್ಥಳೀಯ ಸಂಘ-ಸAಸ್ಥೆಗಳ ಪ್ರಮುಖರು, ಗಣ್ಯರನ್ನು ಗೌರವಿಸಲಾಯಿತು.

ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಭಟ್, ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ವೈದ್ಯನಾಥ ಪಾತ್ರಿ ಅಡ್ವಕೇಟ್ ಚಂದ್ರಹಾಸ ಕೌಡೂರು ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರೆ, ನಿತೇಶ್ ಕುಮಾರ್ ಕಾಜಿಲ ವಂದಿಸಿದರು. ಬಳಿಕ ಕಲಾಸಂಗಮ ಕಲಾವಿದರಿಂದ `ಶಿವದೂತೆ ಗುಳಿಗೆ’ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter