ದುರ್ವಾಸನೆ ಮನವರಿಕೆ : ಡಾ. ಭರತ್ ಶೆಟ್ಟಿ ಭರವಸೆ
ಕೈಕಂಬ : ವಾಮಂಜೂರು ತಿರುವೈಲು ವಾರ್ಡ್ನ ಆಶ್ರಯನಗರ, ಓಂಕಾರನಗರ ಹಾಗೂ ಸುತ್ತಲ ಪ್ರದೇಶದಲ್ಲಿ ನಿತ್ಯ ದುರ್ವಾಸನೆ ಬೀರುತ್ತ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಿರುವ `ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ’ ಅಣಬೆ ಕೃಷಿ ಫ್ಯಾಕ್ಟರಿಯ ಹೊರ ವಲಯದಲ್ಲಿರುವ ತೋಟದ ಮನೆ ಹಾಗೂ ಸುತ್ತಲ ಪ್ರದೇಶಕ್ಕೆ ಮಾ. ೨೪ರಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫ್ಯಾಕ್ಟರಿಯಿಂದ ಹೊರಹೊಮ್ಮುವ ದುರ್ವಾಸನೆ ವಿರುದ್ಧ ಮಾ. ೨೧ರಂದು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ, ದುರ್ವಾಸನೆಮುಕ್ತಗೊಳಿಸಿ ಇಲ್ಲವೇ, ಫ್ಯಾಕ್ಟರಿ ಸ್ಥಳಾಂತರಿಸಿ' ಎಂದು ಆಗ್ರಹಿಸಿದ್ದರು. ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ, ಫ್ಯಾಕ್ಟರಿಯ ಆಡಳಿತದೊಂದಿಗೆ ಮಾತುಕತೆ ನಡೆಸಿ,ದುರ್ವಾಸನೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆಯೂ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಕಂಡು ಬಂದಲ್ಲಿ ಫ್ಯಾಕ್ಟರಿ ವಿರುದ್ಧ ಮಂಡಳಿಯೇ ಸೂಕ್ತ ಕ್ರಮ ಕೈಗೊಳ್ಳಬೇಕಾದೀತು’ ಎಂದು ಎಚ್ಚರಿಕೆ ನೀಡಿದ್ದರು. ಇಷ್ಟಿದ್ದರೂ, ಈಗಲೂ ಫ್ಯಾಕ್ಟರಿಯಿಂದ ದುರ್ವಾಸನೆ ನಿಂತಿಲ್ಲ ಎಂದು ಸ್ಥಳೀಯರು ಶಾಸಕ ಡಾ. ಭರತ್ ಶೆಟ್ಟಿ ಅವರಲ್ಲಿ ದೂರಿಕೊಂಡರು.
ಫ್ಯಾಕ್ಟರಿ ಹೊರ ಪ್ರದೇಶದಲ್ಲಿ ಸುತ್ತಾಡಿ, ಖುದ್ದಾಗಿ ದುರ್ವಾಸನೆ ಅನುಭವಿಸಿದ ಶಾಸಕರು ಸ್ಥಳೀಯರೊಂದಿಗೆ ಮಾತನಾಡಿ, ಸ್ಥಳೀಯರ ಬೇಡಿಕೆಯಂತೆ ಶೀಘ್ರವೇ ಸ್ಥಳಕ್ಕೆ ಜಿಲ್ಲಾಧಿಕಾರಿಯವರನ್ನು ಕರೆಸಿ, ವಾಸ್ತವ ಪರಿಚಯಿಸಿ ಸೂಕ್ತ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಶಾಸಕರೊಂದಿಗೆ ತಿರುವೈಲು ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಉದ್ಯಮಿ ರಘು ಸಾಲ್ಯಾನ್, ತೋಟದ ಮನೆ ಮಾಲಕ ಆಳ್ವಾರಿಸ್ ಮತ್ತಿತರರು ಉಪಸ್ಥಿತರಿದ್ದರು.
