ತಿರುವೈಲು ಶಾಲೆಯಲ್ಲಿ ಎರಡು ತರಗತಿ
ಕೊಠಡಿಗೆ ಡಾ. ಭರತ್ ಶೆಟ್ಟಿ ಶಿಲಾನ್ಯಾಸ
ಕೈಕಂಬ: ವಾಮಂಜೂರಿನ ತಿರುವೈಲು ಗ್ರಾಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ `ವಿವೇಕ’ ಯೋಜನೆಯಡಿ ಮಂಜೂರಾದ ೨೭ ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ೨ ತರಗತಿ ಕೊಠಡಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾ. ೨೪ರಂದು ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಶಾಸಕನಾದ ಬಳಿಕ ಕ್ಷೇತ್ರದ ಬಹುತೇಕ ಎಲ್ಲ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತಂದಿದ್ದೇನೆ. ರಾಜ್ಯ ಸರ್ಕಾರ ಹಲವು ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಆರ್. ಈಶ್ವರ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.
ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು ಸ್ವಾಗತಿಸಿದರು. ತಿರುವೈಲ್ ೨೦ನೇ ವಾರ್ಡ್ನ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ದೈಹಿಕ ಶಿಕ್ಷಣ ಪರಿವೀಕ್ಷಕ ರವಿಶಂಕರ್, ದೈಹಿಕ ಶಿಕ್ಷಕ ಗೋಪಾಲ್, ಸ್ಟ್ಯಾನಿ ಕುಟಿನ್ಹೊ, ದಿನೇಶ್ ಜೆ. ಕರ್ಕೇರ, ಉದ್ಯಮಿ ರಘು ಸಾಲ್ಯಾನ್, ಅನಿಲ್ ರೈ ವಾಮಂಜೂರು, ಸಹಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಜೆನೆಟ್ ಪಿಂಟೊ ವಂದಿಸಿದರು.