ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ, ವಿಜ್ಞಾಪನಾಪತ್ರ ಬಿಡುಗಡೆ ‘ಸಂಪತ್ತು ಒಳಿತಿಗೆ ಬಳಸದಿದ್ದರೆ ಆಪತ್ತು: ಪೇಜಾವರಶ್ರೀ’
ಬಂಟ್ವಾಳ:ಸಮಾಜದಲ್ಲಿ ದುಡಿಮೆಯ ಒಂದು ಭಾಗವನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಬೇಕು. ದೇವರ ಸಾರಥ್ಯ ಇದ್ದಾಗ ಮಾತ್ರ ನಮಗೆ ಜೀವನದಲ್ಲಿ ಗೆಲುವು ಸಿಗುತ್ತದೆ ಎಂಬುದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನನ ನಡುವಿನ ಸಂಭಾಷಣೆಯಿಂದ ಸ್ಪಷ್ಟವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ ೨.೫ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಗರ್ಭಗುಡಿ, ತೀರ್ಥ ಮಂಟಪ ವiತ್ತು ಸುತ್ತುಪೌಳಿ ನಿರ್ಮಾಣ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕ್ಷೇತ್ರದಲ್ಲಿ ೩೦೦ಕ್ಕೂ ಮಿಕ್ಕಿ ದೇವಸ್ಥಾನಗಳಿಗೆ ರಸ್ತೆ ಸಂಪರ್ಕ ಮತ್ತು ಕಾಂಕ್ರಿಟೀಕರಣಗೊಳಿಸಿರುವುದು ತೃಪ್ತಿ ತಂದಿದೆ ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿ ಮಾತನಾಡಿ, ‘ಸಂಪತ್ತು ಸದ್ಬಳಕೆಯಾಗದಿದ್ದಲ್ಲಿ ಆಪತ್ತು ಆಗಿ ಪರಿವರ್ತನೆಗೊಳ್ಳುತ್ತದೆ’ ಎಂದರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ನಮ್ಮಲ್ಲಿ ಧಾರ್ಮಿಕ ಶಿಸ್ತಿನ ಜೊತೆಗೆ ಹಣಕ್ಕಿಂತ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಇರಬೇಕು. ಪರಕೀಯರ ಆಕ್ರಮಣ ಮತ್ತು ಮತಾಂತರದ ಜೊತೆಗೆ ಭಯೋತ್ಪಾದಕರ ಅಟ್ಟಹಾಸ ತಡೆಯುವಲ್ಲಿ ಭಾರತೀಯರ ಸಂಘಟಿತ ರಾಷ್ಟೃಭಕ್ತಿಯೂ ಅಗತ್ಯವಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಶುಭ ಹಾರೈಸಿದರು.ಮುಂಬೈ ಉದ್ಯಮಿ ಸುರೇಶ್ ಶಿವರಾಮ್ ಗೌಡ ಮುದ್ದಾಜೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ವಸಂತ ಗೌಡ ಮುದ್ದಾಜೆ, ಕೊಯಿಲ ಬಿಲ್ಲವ ಸಂಘದ ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆಗುತ್ತು, ಬದನಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘಂದ ಅಧ್ಯಕ್ಷ ಸುಂದರ ಭಂಡಾರಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ ಶೆಟ್ಟಿ ಸೀತಾಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಭಜನಾ ಮಂಡಳಿ ಅಧ್ಯಕ್ಷ ರಾಜೇಶ ಶಿವನಗರ, ಪ್ರಧಾನ ಅರ್ಚಕ ಡಿ.ರಾಮಚಂದ್ರ ಭಟ್, ಅರ್ಚಕರಾದ ಡಿ.ಹರೀಶ ಭಟ್, ದಿನೇಶ ಭಟ್ ದೈಲ, ಪ್ರಮುಖರಾದ ಸದಾನಂದ ಶೆಟ್ಟಿ ಮಡ್ರಾಯಿಬೀಡು, ಸಚಿನ್ ಕುಮಾರ್ ಜೈನ್ ಪಡ್ರಾಯಿಬೀಡು, ಇಂದಿರಾ ಮಧುಕರ ಬಂಗೇರ, ಹೇಮಾ ಎಚ್.ರಾವ್, ಚಂದ್ರಶೇಖರ ಗೌಡ ಕಾರಂಬಡೆ, ಶಮಿತ್ ಶಿವನಗರ ಮತ್ತಿತರರು ಇದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದಿನೇಶ ಸುವರ್ಣ ವಂದಿಸಿ, ನಿರೂಪಿಸಿದರು.