ವಾಮದಪದವು: ಕರ್ಣಾಟಕ ಬ್ಯಾಂಕಿನ ೯೦೭ನೇ ಶಾಖೆ ಉದ್ಘಾಟನೆ ಗ್ರಾಮೀಣ ಜನತೆಗೆ ಮಾನವೀಯ ಸೇವೆ: ಜಯ ನಾಗರಾಜ ರಾವ್
ಬಂಟ್ವಾಳ:ದೇಶದ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಕಳೆದ ೧೦೦ ವರ್ಷಗಳಿಂದ ಗುಣಮಟ್ಟದ ಸೇವೆ ಜೊತೆಗೆ ಗ್ರಾಮೀಣ ಜನತೆಗೆ ಮಾನವೀಯ ಸಂಬಂದಿಸಿದ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ಣಾಟಕ ಬ್ಯಾಂಕ್ ಡಿಜಿಟಲೀಕರಣ ಮತ್ತು ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಬ್ಯಾಂಕಿನ ಮಾನವ ಸಂಪನ್ಮೂಲ ವಿಭಾಗದ ಮಹಾ ಪ್ರಬಂಧಕ ಜಯ ನಾಗರಾಜ ರಾವ್ ಹೇಳಿದ್ದಾರೆ.
ಇಲ್ಲಿನ ವಾಮದಪದವಿನಲ್ಲಿ ಸೋಮವಾರ ಶುಭಾರಂಭಗೊಂಡ ಕರ್ಣಾಟಕ ಬ್ಯಾಂಕಿನ ೯೦೭ನೇ ಪಿಲಿಮೊಗರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ವಾಮದಪದವು ಪರಿಸರದಲ್ಲಿ ಹಲವಾರು ಸಹಕಾರಿ ಸಂಘ ಮತ್ತು ಎರಡು ರಾಷ್ಟ್ರೀಕೃತ ಬ್ಯಾಂಕ್ ಕಾರ್ಯ ನಿರ್ವಹಿಸುವ ಮೂಲಕ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ ಎಂದರು. ಸ್ಥಳೀಯ ವೈದ್ಯ ಡಾ. ರವಿ ಎನ್.ಶರ್ಮಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಜನಸ್ನೇಹಿಯಾಗಿ ಗ್ರಾಹಕರ ಮನಸ್ಸು ಗೆಲ್ಲಬೇಕು ಎಂದರು.
ಇದೇ ವೇಳೆ ಕಟ್ಟಡ ಮಾಲೀಕ ನೋಣಯ್ಯ ಬಂಗೇರ ಭವಾನಿ ದಂಪತಿಯನ್ನು ಸನ್ಮಾನಿಸಲಾಯಿತು.ಮಂಗಳೂರು ಪ್ರಾದೇಶಿಕ ಸಹಾಯಕ ಪ್ರಬಂಧಕ ಡ್ಯಾನಿಶ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಶಾಖಾಧಿಕಾರಿ ಹರಿಕೃಷ್ಣ ನಾಯ್ಕ್ ವಂದಿಸಿದರು. ಆಶಾ ಜಿ. ಕಾರ್ಯಕ್ರಮ ನಿರೂಪಿಸಿದರು.