ಶ್ರೀ ವಜ್ರದೇಹಿ ಮಠದ ಸ್ವಾಮಿಯವರಿಂದ ವಜ್ರದೇಹಿ ಕ್ರಿಕೆಟ್ ಉದ್ಘಾಟನೆ
ಕೈಕಂಬ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರದೇಹಿ ಘಟಕ ಗುರುಪುರ ಇದರ ಆಶ್ರಯದಲ್ಲಿ ಗುರುಪುರ ಕುಕ್ಕುದಕಟ್ಟೆ ಮೈದಾನದಲ್ಲಿ ಮಾ. ೧೯ರಂದು ಮೂರು ಅಶಕ್ತ ಕುಟುಂಬಗಳ ಮನೆ ದುರಸ್ಥಿಗೆ ಆಯೋಜಿಸಲಾದ `ವಜ್ರದೇಹಿ ಟ್ರೋಪಿ-೨೦೨೩’ ಕ್ರಿಕೆಟ್ ಟೂರ್ನಿಯನ್ನು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ರಾಜಶೇಖರಾನಂದ ಸ್ವಾಮಿ ಅವರು ಮಾತನಾಡಿ, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಇಂದು ಗ್ರಾಮೀಣ ಮಟ್ಟದಲ್ಲೂ ನಡೆಯುತ್ತಿದೆ. ಮನೋರಂಜನೆ ನೀಡುವ ಕ್ರಿಕೆಟ್, ಆರೋಗ್ಯ ಮತ್ತು ವ್ಯಾಯಾಮದ ದೃಷ್ಟಿಯಿಂದಲೂ ಪ್ರಯೋಜನಕಾರಿ ಎಂದರು.
ಗುರುಪುರ ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ಸಚಿನ್ ಅಡಪ, ನಿವೃತ್ತ ಪೊಲೀಸ್ ಜಿ. ಕೆ. ನರಸಿಂಹ ಪೂಜಾರಿ, ಉದ್ಯಮಿ ಲೋಹಿತಾಶ್ವ ಭಂಡಾರಿ, ನಾಗೇಶ್ ಕೊಟ್ಟಾರಿ, ಹರೀಶ್ ಭಂಡಾರಿ, ವಿಹಿಂಪ ಬಜರಂಗದಳ ವಜ್ರದೇಹಿ ಘಟಕ ಗುರುಪುರದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತಿತರರು ಇದ್ದರು.
ಸಂಘಟನೆ ಮುಖಂಡ ವಸಂತ ಸುವರ್ಣ ಗುರುಪುರ ಸ್ವಾಗತಿಸಿ, ವಂದಿಸಿದರು. ಸೀಮಿತ ಓವರ್‌ನ ಈ ಕ್ರಿಕೆಟ್ ಟೂರ್ನಿಯಲ್ಲಿ ೧೬ ತಂಡಗಳು ಪ್ರಥಮ(೨೨,೨೨೨ ರೂ), ದ್ವಿತೀಯ(೧೧,೧೧೧ ರೂ) ಬಹುಮಾನ ಮೊತ್ತಕ್ಕಾಗಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಸಲಿವೆ.