ಅಡ್ಡೂರಿನ ಸಹರಾ ಶಿಕ್ಷಣ ಸಂಸ್ಥೆಯಲ್ಲಿ ಪಿಯು ಕಾಲೇಜು ತರಗತಿ ಆರಂಭ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರಿನಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಂಡಬ್ಲ್ಯೂಎ) ಸಂಚಾಲನೆಯ ಸಹರಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವ ಪದವಿಪೂರ್ವ(ಪಿಯು) ಶಿಕ್ಷಣಕ್ಕೆ ಮಾ. ೧೮ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ವಾಣಿಜ್ಯ ಮತ್ತು ಕಲಾ ವಿಭಾಗದ ಸಹರಾ ಪಿಯು ಕಾಲೇಜು ಕಟ್ಟಡ, ನವೀಕೃತ ಸಹರಾ ಪ್ರೌಢಶಾಲಾ ಕಟ್ಟಡ ಉದ್ಘಾಟಿಸಿದ ಬಳಿಕ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಡ್ಡೂರಿನ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ ಮೌಲಾನ ಸದಾಕತುಲ್ಲ ಫೈಝಿ ಆಶೀರ್ವಚನ ನೀಡಿ, ವಿಶ್ವದಲ್ಲಿ ಅತಿ ದೊಡ್ಡ ಸಂಪತ್ತು ಜ್ಞಾನ. ಇದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಗ್ರಾಮಗಳು ಬೆಳೆಯಬೇಕಿದ್ದರೆ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದರು.
ಮಂಗಳೂರು ಶಾಸಕ ಹಾಗೂ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಇಲ್ಲಿನ ಕಿರಿಯರು ಈ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕೇ ಹೊರತು, ಜಾತಿ ರಾಜಕೀಯ ಮಾಡುವುದಲ್ಲ. ಸಂಸದರು, ಶಾಸಕರು ಮತ್ತು ಅಧಿಕಾರಿ ವರ್ಗದವರು ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕುಳಿತುಕೊಂಡರೆ ಈ ದೇಶ ಬಲಿಷ್ಠವಾಗುವುದಿಲ್ಲ. ಪ್ರತಿಯೊಂದು ವಿಷಯದಲ್ಲಿ ಗ್ರಾಮೀಣ ಮಟ್ಟದಿಂದ ಚಿಂತಿಸುವ ಅಗತ್ಯವಿದೆ ಎಂದರು.
ಮಾಜಿ ಶಾಸಕ ಮೊಯಿದಿನ್ ಬಾವಾ ಮಾತನಾಡಿ, ೧೯೮೦ರ ಹೊತ್ತಿಗೆ ೧೫ ಮಕ್ಕಳೊಂದಿಗೆ ಆರಂಭಿಸಿರುವ ಈ ಸಂಸ್ಥೆಯಲ್ಲಿ ಈಗ ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದುಕೊಂಡಿದ್ದ ಇಲ್ಲಿನ ಹಿರಿಯರ ದೂರದೃಷ್ಟಿ ಮೆಚ್ಚಲೇಬೇಕು. ಜಾತ್ಯಾತೀತ ಶಿಕ್ಷಣವಾಗಿ ಬೆಳೆಯುತ್ತಿರುವ ಸಹರಾ ವಿದ್ಯಾಲಯದ ಪ್ರಗತಿಯಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಎಇಐಎಫ್(ಮೀಫ್) ದಕ-ಉಡುಪಿ ಜಿಲ್ಲಾಧ್ಯಕ್ಷ ಮೂಸಬ್ಬ ಬ್ಯಾರಿ ಮಾತನಾಡಿ, ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಆಂಗ್ಲ ಮಾಧ್ಯಮ ಶಿಕ್ಷಣ ಈಗ, ಇಂತಹ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುವಂತಾಗಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಲ್ಲಿ ಮೀಫ್ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ. ಎಚ್. ಮ್ಯೆಯ್ಯೆದ್ದಿ, ಎ. ಕೆ. ಆದಂ, ಅಬೂಬಕ್ಕರ್, ಪಂಕಜಾ ಶೆಟ್ಟಿ, ಅಬೀಬ್ ಸಲ್ಲಾಜೆ, ಟಿ. ಎಸ್. ರಫೀಕ್ ಮತ್ತಿತರರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಿದವರಿಗೆ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಸಹರಾ ಶಿಕ್ಷಣ ಸಂಸ್ಥೆಯ ನೂತನ ಲೋಗೋ ಅನಾವರಣಗೊಳಿಸಲಾಯಿತು.
ಸಂಸ್ಥೆಯ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಸಹರಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲ ಕೇಶವ ಕೆ. ಸ್ವಾಗತಿಸಿದರು. ಸಹರಾ ಸಂಸ್ಥೆಯ ಕರೆಸ್ಪಾಂಡೆAಟ್ ಎ. ಕೆ. ಇಸ್ಮಾಯಿಲ್, ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಎ. ಅಹ್ಮದ್ ಬಾವ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್, ಕಾಂಜಿಲಕೋಡಿ ಬದ್ರುಲ್ ಹುದಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವಾ, ಅಡ್ಡೂರು ಆಯಿಷಾ ಸಿದ್ದಿಕ್ ಮಸೀದಿ ಅಧ್ಯಕ್ಷ ಸೌಕತ್ ಅಲಿ, ಉದ್ಯಮಿಗಳಾದ ರಿಜ್ವಾನ್, ಅಬ್ದುಲದ ಲತೀಫ್, ಪಿಟಿಎ ಅಧ್ಯಕ್ಷರಾದ ವಿಶ್ವಾಂಭರ, ನಿರಂಜನದಾಸ್ ಭಂಡಾರಿ, ಪೂಜಾ ಕಿರಣ್ ಹಾಗೂ ಎ. ಕೆ. ಅಶ್ರಫ್, ಎ. ಕೆ. ಇಸ್ಮಾಯಿಲ್, ಡಾ. ಸಿದ್ದಿಕ್, ಎನ್. ಇಸ್ಮಾಯಿಲ್, ಅಬ್ದುಲ್ ಖಾದರ್ ಇಡ್ಮಾ, ಟಿ. ಎಸ್. ಮುಹಮ್ಮದ್, ರಿಯಾಝ್, ಇಂಜಿನಿಯರ್ ರಂಜಿತ್ ಆಚಾರ್ಯ, ಎ. ಕೆ. ಆದಂ, ಝೈನುದ್ಧಿನ್, ಅಬ್ದುಲ್ ಖಾದರ್ ತೋಕೂರು, ಉದ್ಯಮಿ ಸಿದ್ದಿಕ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪಾಲಕರು, ನಾಗರಿಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಮೋಹಿನಿ, ಅಶ್ವಿನಿ ಮತ್ತು ಶಮೀಮಾ ಕಾರ್ಯಕ್ರಮ ನಿರೂಪಿಸಿದರು.