ಮತ್ತೊಂದು ಅವಧಿಗೆ ಶಾಸಕನಾದರೆ
ಕ್ಷೇತ್ರದ ಇಂಚಿಂಚೂ ಅಭಿವೃದ್ಧಿ : ಡಾ. ಭರತ್ ಶೆಟ್ಟಿ
ಕೈಕಂಬ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ, ಮೊದಲ ಹಂತದಲ್ಲಿ ೨೦ ಕೋಟಿ ರೂ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಮುಂದಿನ ಬಾರಿ ಮತದಾರರ ಆಶೀರ್ವಾದದಿಂದ ೨ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಇಲ್ಲಿ ೨ನೇ ಹಂತದಲ್ಲಿ ಇನ್ನಷ್ಟು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಭರವಸೆ ನೀಡಿದರು.

ಅಡ್ಯಾರುಕಟ್ಟೆಯಲ್ಲಿ ಮಾ. ೧೬ರಂದು ಬಿಜೆಪಿ ಆಯೋಜಿಸಿದ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ವಿಷಯ ಬಂದಾಗ ನಾನು ಯಾವುದೇ ಜಾತಿ-ಧರ್ಮ ನೋಡಿಲ್ಲ. ಎಲ್ಲ ಪಂಚಾಯತ್‌ಗಳ ಪ್ರತಿಯೊಂದು ವಾರ್ಡ್ಗಳಲ್ಲಿ ರಸ್ತೆಗಳಾಗಿದ್ದರೆ, ಬಹುತೇಕ ಓಣಿ-ಕೇರಿಗಳು ವಿಸ್ತರಣೆಯಾಗಿವೆ. ಸದ್ಯ ಜನರಿಗೆ ಗದ್ದೆಗಳಲ್ಲಿ ನಡೆದಾಡುವ ಪ್ರಮೇಯ ತಪ್ಪಿದೆ ಎಂದರು.

ನನ್ನ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರೂ, ಅಭಿವೃದ್ಧಿ ಮೂಲಕ ಆ ಪಕ್ಷ ನಾಯಕರಿಗೆ ಉತ್ತರ ನೀಡಿದ್ದೇನೆ. ಪ್ರವಾಹ, ಕೊರೊನಾ ಸಹಿತ ಪ್ರಕೃತಿ ವಿಕೋಪ ಸಂದರ್ಭದ ೩ ವರ್ಷ ಹೊರತುಪಡಿಸಿ, ಉಳಿದ ೨ ವರ್ಷದಲ್ಲಿ ೨,೦೦೦ ಕೋಟಿ ಅನುದಾನ ತಂದು ಪ್ರತಿಯೊಂದು ಕಡೆ ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ ಎಂದರು.

ರಾಷ್ಟ್ರೀಯತೆ ಮತ್ತು ಹಿಂದೂತ್ವ ನನ್ನ ಉಸಿರು. ನನ್ನ ಧರ್ಮ ಮತ್ತು ಪಕ್ಷದ ಸಿದ್ಧಾಂತ ಉಳಿಸಿಕೊಂಡು ಸರ್ವರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅನ್ಯಮತೀಯರ ದ್ವೇಷಿಸಿಲ್ಲ. ರಾಜಕೀಯ ಉದ್ದೇಶ ಪೂರೈಸಿಕೊಳ್ಳಲು ಕೆಲವರು ತಮ್ಮ ಮತಗಳಿಂದ ದೂರವಿಡಲು ಪ್ರಯತ್ನಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೂರ್ಣಗೊಂಡ ಕೆಲವು ಕಾಮಗಾರಿ ಉದ್ಘಾಟಿಸಿದ ಶಾಸಕರು, ರಸ್ತೆ ಅಸಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದರು. ಸ್ಥಳೀಯ ಬಿಜೆಪಿಗರು ಶಾಸಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಪ್ರಮುಖರಾದ ಅಜಿತ್ ಶೆಟ್ಟಿ ಅಡ್ಯಾರುಗುತ್ತು, ಮಹಾಬಲ ಅಡ್ಯಾರು, ಪ್ರಸಾದ್ ಸಾಮಾನಿ, ಸುಜಿತ್ ಅಡ್ಯಾರು, ಪ್ರಸನ್ನ, ಗಣೇಶ್ ರೈ, ನಳಿನಿ, ವಿಶ್ವನಾಥ ಶೆಟ್ಟಿ, ಕೃಷ್ಣ, ಶ್ರವಣ್, ರವಿರಾಜ ಚೌಟ, ಪಕ್ಷ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.