ತಿರುವೈಲು ಜೈಶಂಕರ್ ಮಿತ್ರ ಮಂಡಳಿ ಸುವರ್ಣ ಸಂಭ್ರಮ
ಕೊರೊನಾ ಸಂದರ್ಭದಲ್ಲಿ ಸಂಘದಿAದ ಅವಿಸ್ಮರಣೀಯ ಸೇವೆ : ಡಾ. ಭರತ್ ಶೆಟ್ಟಿ
ಕೈಕಂಬ : ಹಿರಿಯರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಜೈ ಶಂಕರ್ ಮಿತ್ರ ಮಂಡಳಿಯು ಅಶಕ್ತರ ಕಣ್ಣೀರೊರಸುವ ಹಾಗೂ ಬಡವರ ಕಷ್ಟಕ್ಕೆ ನೆರವಾಗುವಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಗಮನಸೆಳೆದಿದೆ. ಯಕ್ಷಗಾನಕ್ಕೆ ಮಹತ್ವ ನೀಡುತ್ತ ಬಂದಿರುವ ಮಂಡಳಿಯು ಕೊರೊನಾ ಸಂದರ್ಭದಲ್ಲಿ ನಡೆಸಿರುವ ಸಮಾಜಸೇವೆ ಅವಿಸ್ಮರಣೀಯ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ವಾಮಂಜೂರು ತಿರುವೈಲಿನ ದೇವಸ ಗದ್ದೆಯಲ್ಲಿ ಆಯೋಜಿಸಲಾದ ಜೈ ಶಂಕರ್ ಮಿತ್ರ ಮಂಡಳಿಯ ಸುವರ್ಣ ಮಹೋತ್ಸವ ಸಂಭ್ರಮದ ೨ನೇ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸಮಾಜದಲ್ಲಿ ಬಡವರ ಶೋಷಣೆ, ಉಳ್ಳವರಿಂದ ದಬ್ಬಾಳಿಕೆ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಹುಟ್ಟಿಕೊಂಡಿದ್ದ ಸಮಾನ ಮನಸ್ಕರ ಸಂಘಟನೆ ಇದಾಗಿದೆ. ಪ್ರೀತಿ ಮತ್ತು ನಿಸ್ವಾರ್ಥ ಮನೋಭಾವದಿಂದ ಬಡಜನರಿಗಾಗಿ ಸೇವೆ ನಡೆಸುತ್ತ ಬಂದಿರುವ ಸಂಘಟನೆಯೊಂದು ೫೦ ವರ್ಷ ಪೂರ್ಣಗೊಳಿಸುತ್ತಿರುವುದು ನಿಜಕ್ಕೂ ಸಂಭ್ರಮದ ವಿಷಯ. ಇಂತಹ ಸಂಘಟನೆ ಊರಿಗೊಂದಿರಬೇಕು ಎಂದರು.
ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್, ವಾಮಂಜೂರು ಸಂತ ಜೋಸೆಫರ ಶ್ರಮಿಕ ದೇವಾಲಯದ ಧರ್ಮಗುರು ಫಾ. ಜೇಮ್ಸ್ ಡಿ’ಸೋಜ ಮತ್ತು ವಾಮಂಜೂರು ಇಸ್ಲಾಹುಲ್ ಇಸ್ಲಾಂ ಜುಮ್ಮಾ ಮಸೀದಿ ಧರ್ಮಗುರು ಮುಹಮ್ಮದ್ ಫಾಯಿಝ್ ಅಲ್-ಫೌಳಿಲ್ ಆಶೀರ್ವಚನ ನೀಡಿದರು.
ಡಾ. ಸತೀಶ್ ಕಲ್ಲಿಮಾರ್ ಅವರು ಸನ್ಮಾನಕ್ಕೆ ಉತ್ತರಿಸಿ, ಜೈ ಶಂಕರ್ ಮಿತ್ರ ಮಂಡಳಿಯ ಆರೋಗ್ಯ ಸೇವೆಯ ಕಾರ್ಯವೈಖರಿ ಯಾವತ್ತೂ ನೆನಪಿನಲ್ಲಿ ಉಳಿಯುವಂತಹದ್ದು ಎಂದರು.
ಮಂಡಳಿಯ ಉಪಾಧ್ಯಕ್ಷ ರಘು ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಸಿದರು. ತಿರುವೈಲು ೨೦ನೇ ವಾರ್ಡ್ನ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ರೈ, ಬಿಜೆಪಿ ಮುಖಂಡ ರಾಜೇಶ್ ಕೊಟ್ಟಾರಿ, ಸ್ವರೂಪಾ ಎನ್. ಶೆಟ್ಟಿ, ರಾಜಕುಮಾರ್ ಶೆಟ್ಟಿ, ಜಯಪ್ರಕಾಶ್(ಜೆಪಿ), ಸತೀಶ್ ಶೆಟ್ಟಿ, ಮಂಡಳಿ ಗೌರವಾಧ್ಯಕ್ಷ ಗಂಗಯ್ಯ ಅಮೀನ್, ಅಧ್ಯಕ್ಷ ದಿವಾಕರ ಆಚಾರ್ಯ, ಮಂಡಳಿಯ ಮಾತೃ ಮಂಡಳಿ ಅಧ್ಯಕ್ಷೆ ಪುಷ್ಪಾ ಆರ್., ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ, ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನೋಜ್ ವಾಮಂಜೂರು ನಿರೂಪಿಸಿದರೆ, ಮಂಡಳಿಯ ಕಾರ್ಯದರ್ಶಿ ಮೋಹನದಾಸ್ ವಂದಿಸಿದರು. ಬಳಿಕ ಕಲಾ ಸಂಗಮ ಕಲಾವಿದರಿಂದ `ಶಿವದೂತೆ ಗುಳಿಗೆ’ ತುಳು ನಾಟಕ ಪ್ರದರ್ಶನಗೊಂಡಿತು.