ಶ್ರೀ ಕ್ಷೇತ್ರ ಪೆರಾರದಲ್ಲಿ ೨ನೇ ದಿನದ ಧಾರ್ಮಿಕ ಸಭೆ
ಮುಂದಿನ ಪೀಳಿಗೆಯಿಂದಲೂ ಧರ್ಮ ಜಾಗೃತಿ ಸಾಧ್ಯ : ಆಸ್ರಣ್ಣ
ಕೈಕಂಬ : ಜಗತ್ತೇ ಭಾರತವನ್ನು ದೇವರ ನಾಡು ಎಂದು ಕರೆಯುವಂತೆ ಮಾಡುವಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟಿರುವ ಸಂಪ್ರದಾಯ, ಕಟ್ಟಳೆ ಕಾರಣವಾಗಿದ್ದು, ಇದನ್ನು ಪ್ರಸಕ್ತ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು. ಕತವ್ಯದಲ್ಲಿ ದೇವರನ್ನು ಕಾಣಬೇಕು. ಕಟ್ಟುಪಾಡು ಉಳಿಸಿ ಧರ್ಮ ಜಾಗೃತವಾಗುವಂತೆ ಮಾಡುವಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಶ್ರೀ ಕ್ಷೇತ್ರ ಪೆರಾರದಲ್ಲಿ ಛತ್ರದರಸು ಚಾವಡಿ, ಬಂಟಕಂಬ ರಾಜಾಂಗಣ ಮತ್ತು ಪಿಲಿಚಾಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಸಂದರ್ಭದ ೨ನೇ ದಿನದಂದು(ಮಾ. ೬) ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಪೆರಾರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇಲ್ಲಿನ ಇತಿಹಾಸ ಊರಿನ ಮಕ್ಕಳ ಸಹಿತ ಎಲ್ಲರಿಗೂ ತಿಳಿಯುವ ಅಗತ್ಯವಿದೆ. ಇದು ಇತರ ಕ್ಷೇತ್ರಗಳಂತಲ್ಲ. ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಇದೂ ಒಂದು. ಇಲ್ಲಿ ಈಗಾಗಲೇ ೩೦ ಲಕ್ಷ ರೂ ಅನುದಾನ ತರಲಾಗಿದ್ದು, ಇನ್ನೂ ೫ ಲಕ್ಷ ಸಿಗುವ ನಿರೀಕ್ಷೆ ಇದೆ. ಸಂಸದರಿಂದಲೂ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ನೆರವಿನ ನಿರೀಕ್ಷೆ ಇದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಅಜೀರ್ಣಾವಸ್ಥೆಯಲ್ಲಿರುವ ಇತರ ಕ್ಷೇತ್ರಗಳೂ ಜೀರ್ಣೋದ್ಧಾರವಾಗಬೇಕು. ದೈವ-ದೇವರ ಕೆಲಸದಲ್ಲಿ ವಿದ್ಯಾವಂತರೂ ಕೈಜೋಡಿಸುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಅದಾನಿ ಗುಂಪಿನ ಅಧಿಕಾರಿ ಕಿಶೋರ್ ಆಳ್ವ, ವಿಜಯನಾಥ ವಿಠಲ ಶೆಟ್ಟಿ ಮಿಜಾರು ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೊಳಕೆಬೈಲು ಶಿವಾಜಿ ಶೆಟ್ಟಿ, ರಾಘವೇಂದ್ರ ಆಚಾರ್ಯ, ಕೃಷ್ಣ ಅಮೀನ್, ಬಾಬು ಶೆಟ್ಟಿ, ಅಮಿತಾ ಎಂ. ಶೆಟ್ಟಿ, ಗುತ್ತು ಮನೆತನದವರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ವಿಲೇದಾರರು, ಸಿಬ್ಬಂದಿ ವರ್ಗ, ಭಕ್ತರು ಇದ್ದರು.
ಲಕ್ಷ್ಮಣ್ ಶರ್ಮ, ಶೈಲೇಶ್ ಆಚಾರ್ಯ, ರಮೇಶ್ ಕಟ್ಟದಬರಿ, ವಿಠಲ ಆಚಾರ್ಯ, ಕೊಳಕೆಬೈಲು ಶಿವಾಜಿ ಶೆಟ್ಟಿ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರಮಿಸಿದ ಹಲವರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ ಸ್ವಾಗತಿಸಿದರೆ, ಅಕ್ಷತಾ ಆರ್. ಶೆಟ್ಟಿ ಪ್ರಸ್ತಾವಿಸಿದರು. ಅಶ್ವಿನ್ ಶೆಟ್ಟಿ ಬೊಂಡಂತಿಲ ನಿರೂಪಿಸಿದರೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುರೇಶ್ ಅಂಚನ್ ವಂದಿಸಿದರು.