ಕಟೀಲು ಯಕ್ಷಗಾನ ಸಮಿತಿ ಮಠದಬೈಲು
ಆಮಂತ್ರಣ ಪತ್ರಿಕೆ ಬಿಡುಗಡೆ
ಕೈಕಂಬ: ಗುರುಪುರ ಮಠದಬೈಲಿನ ಕಟೀಲು ಯಕ್ಷಗಾನ ಸಮಿತಿ ವತಿಯಿಂದ ಎಪ್ರಿಲ್ ೨ರಂದು ಕಟೀಲು ಮೇಳದವರಿಂದ ನಡೆಯಲಿರುವ ೨೫ನೇ ವರ್ಷದ ಬಯಲಾಟ ಪ್ರಯುಕ್ತ ಭಾನುವಾರ(ಮಾ. ೫) ಗುರುಪುರ ಜಲ್ಲಿಗುಡ್ಡೆ ಜೆ.ಸಿ. ಫ್ರೆಂಡ್ಸ್ ಕ್ಲಬ್(ರಿ) ಕಚೇರಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಉಪಾಧ್ಯಕ್ಷ ಜಿ. ಎಂ. ಉದಯ ಭಟ್ ಮಾತನಾಡಿ, ಮುಂದಿನ ಮೂರು ವಾರದೊಳಗೆ ಯಕ್ಷಗಾನ ಮತ್ತು ಎಪ್ರಿಲ್ ೧ರಂದು ನಡೆಯಲಿರುವ ನಾಟಕಕ್ಕಾಗಿ(ಶಿವದೂತೆ ಗುಳಿಗೆ) ಪೂರ್ವ ಸಿದ್ಧತೆ ನಡೆಸಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ನಾಲ್ಕೈದು ತಂಡ ರಚಿಸಿ ಆಹ್ವಾನ ಪತ್ರಿಕೆ ವಿತರಿಸಬೇಕು. ಇತರ ಮೂವರು ಗಣ್ಯರೊಂದಿಗೆ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮೇಳ ಕಳವಾರು ಇದರ ಮಾಲಕ, ಕಲಾವಿದ ಸುರೇಂದ್ರ ಎಂ. ಮಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸದಸ್ಯರು ಕೆಲವು ಮಹತ್ವದ ಸಲಹೆ ನೀಡಿದರು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ಸದಸ್ಯರಾದ ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ಶ್ಯಾಮರಾಯ ಆಚಾರ್ಯ, ಗುರುಪುರ ಯುವಕ ಸಂಘದ ಅಧ್ಯಕ್ಷ ಶಿವಶಂಕರ್, ಬಡಕರೆ ಗೆಳೆಯರ ಬಳಗದ ಅಧ್ಯಕ್ಷ ಶೇಖರ ಪೂಜಾರಿ, ಶ್ರೀ ಶಬರಿ ಸೇವಾ ಸಮಿತಿ ಅಧ್ಯಕ್ಷ ಹೇಮಚಂದ್ರ ಪೂಜಾರಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಪ್ರತಿನಿಧಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಗಣೇಶ್ ಕೊಟ್ಟಾರಿ ಅವರು ಸ್ವಾಗತಿಸಿ ನಿರೂಪಿಸಿದರು.