ಸರಪಾಡಿ: ಪ್ರೇತದ ವೇಷ ಹಾಕಿ ರೂ ೫೭ ಸಾವಿರ ಸಂಗ್ರಹ, ಎರಡು ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಗೆ ಹಸ್ತಾಂತರ
ಬಂಟ್ವಾಳ: ತಾಲ್ಲೂಕಿನ ಸರಪಾಡಿ ಎಂಬಲ್ಲಿ ಪ್ರೇತದ ವೇಷ ಹಾಕಿ ಸಂಗ್ರಹವಾದ ರೂ ೫೭ ಸಾವಿರ ಮೊತ್ತವನ್ನು ಎರಡು ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಗೆ ಬುಧವಾರ ಹಸ್ತಾಂತರಿಸಲಾಯಿತು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಇಲ್ಲಿನ ಸರಪಾಡಿ ಎರಡು ಕುಟುಂಬಗಳ ಬಡ ಮಕ್ಕಳ ಚಿಕಿತ್ಸೆಗೆ ರೂ ೩೦ಸಾವಿರ ಮತ್ತು ಮಣಿನಾಲ್ಕೂರು ಬಡ ಕುಟುಂಬದ ಯುವತಿ ವಿವಾಹಕ್ಕೆ ರೂ ೨೦ ಸಾವಿರ ಮೊತ್ತ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.
ಇಲ್ಲಿನ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ಎಂಬವರು ನವರಾತ್ರಿಗೆ ಪ್ರೇತದ ವೇಷ ಹಾಕಿ ರೂ ೫೭ ಸಾವಿರ ಮೊತ್ತ ಸಂಗ್ರಹಿಸಿದ್ದರು. ಈ ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದರು. ಉಳಿದಂತೆ ರೂ ೭ ಸಾವಿರ ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹಸ್ತಾಂತರಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಅರ್ಚಕ ಜಯರಾಮ ಕಾರಂತ, ಪ್ರಮುಖರಾದ ಉಮೇಶ್ ಆಳ್ವ ಕೊಟ್ಟುಂಜ, ಸುರೇಶ್ ಶೆಟ್ಟಿ ಮೀಯಾರು, ದಿನೇಶ್ ಗೌಡ ನೀರೊಲ್ಬೆ, ಆನಂದ ಶೆಟ್ಟಿ ಬಾಚಕೆರೆ, ಶುಭಕರ ರೈ ಕೊಟ್ಟುಂಜ, ಗಿರೀಶ್ ನಾಯ್ಕ್ ನೀರಪಲ್ಕೆ, ಸತೀಶ್ ಗೌಡ ಕೊಪ್ಪಲ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಚಂದ್ರಶೇಖರ ನಾಯ್ಕ್, ದೇವದಾಸ್ ಅವರ ತಾಯಿ ಲಕ್ಷ್ಮೀ ಮತ್ತಿತರರು ಇದ್ದರು.