ಉಳಾಯಿಬೆಟ್ಟಿನಲ್ಲಿ ೨೯.೫೮ ಕೋ. ರೂ ಜೆಜೆಎಂ-ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಗುದ್ದಲಿಪೂಜೆ
ಕೈಕಂಬ : ಇದು ಕೇಂದ್ರದ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯಡಿಯಲ್ಲಿ ಕಾರ್ಯಗತಗೊಳ್ಳಲಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರ್, ಅರ್ಕುಳ, ಮಲ್ಲೂರು, ಬೊಂಡಂತಿಲ, ಉಳಾಯಿಬೆಟ್ಟು, ನೀರುಮಾರ್ಗ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಗತಗೊಳ್ಳಲಿರುವ ೨೬.೫೮ ಕೋಟಿ ರೂ ವೆಚ್ಚದ ಈ ಕಾಮಗಾರಿ ಪೂರ್ಣಗೊಳ್ಳುತ್ತಲೇ ಗ್ರಾಮಗಳ ಪ್ರತಿಯೊಂದು ಮನೆಗೂ ಕುಡಿಯುವ ನೀರು ಲಭ್ಯವಾಗಲಿದೆ. ಇದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯೂ ಆಗಿತ್ತು ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಉಳಾಯಿಬೆಟ್ಟು ಪಂಚಾಯತ್ ಎದುರು ಅ.01ರಂದು ಶನಿವಾರ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಳವೆ ಬಾವಿಗಳ ನೀರು ಪಡೆಯುವ ಯೋಜನೆ ಜೆಜೆಎಂ ಆಗಿತ್ತಾದರೂ, ನಿರಂತರ ಹಾಗೂ ಎಲ್ಲ ಕಾಲದಲ್ಲೂ ನೀರು ಲಭ್ಯವಾಗಬೇಕೆಂಬ ದೃಷ್ಟಿಯಿಂದ ನದಿ ನೀರು ಶುದ್ಧೀಕರಣ ಘಟಕದಲ್ಲಿ ಪರಿಶುದ್ಧಗೊಳಿಸಿದ ಬಳಿಕ ಟ್ಯಾಂಕ್‌ಗಳಲ್ಲಿ ಶೇಖರಿಸಿ ಕೊಳವೆಗಳ ಮೂಲಕ ಮನೆಮನೆಗೆ ಪೂರೈಸಲಾಗುತ್ತದೆ. ಇದು ಮಂಗಳೂರು ಉತ್ತರ ಸಹಿತ ಮೂಡಬಿದ್ರೆ, ಬಂಟ್ವಾಳ, ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ಒಟ್ಟು ೧೪೦ ಕೋಟಿ ರೂ ವೆಚ್ಚದ ಬೃಹತ್ ಯೋಜನೆಯಾಗಿದೆ ಎಂದರು.
ಯೋಜನೆಯಿಂದ ಮಂಗಳೂರು ನಗರ ಉತ್ತರ ಕ್ಷೇತ್ರದ ೪೧,೦೦೦ ಮನೆಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ನೀರಿನ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಪಂಚಾಯತ್‌ಗಳಿಗೆ ನೀಡಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಎಕ್ಸಿಕ್ಯೂಟಿವ್ ಇಂಜಿನಿಯರ್ ನರೇಂದ್ರ ಬಾಬು ಯೋಜನೆಯ ಬಗ್ಗೆ ಮಾಹಿತಿ ನೀಡಿ, ಬಹುಗ್ರಾಮ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೆ ೫೫ ಲೀಟರ್ ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರಿಗೆ ದರ ನಿಗದಿಪಡಿಸಲಾಗುತ್ತದೆ. ಬೆಂಜನಪದವಿನಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿ, ಅಲ್ಲಿಂದ ೯ ವಲಯಾಧರಿತ ಹಾಗೂ ಇತರ ಸಣ್ಣ ಟ್ಯಾಂಕ್‌ಗಳ ಮೂಲಕ ಪ್ರತಿ ಮನೆಗೂ ನಳ್ಳಿ ಮೂಲಕ ನೀರು ಪೂರೈಸಲಾಗುತ್ತದೆ ಎಂದರು.
ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಸ್ವಾಗತಿಸಿದರು. ಉಳಾಯಿಬೆಟ್ಟು ಪಂಚಾಯತ್ ಉಪಾಧ್ಯಕ್ಷೆ ರತ್ನಾ ಎಸ್, ಪಿಡಿಒ ಅನಿತಾ ಕ್ಯಾಥರಿನ್, ಯೋಜನೆ ವ್ಯಾಪ್ತಿ ಪ್ರದೇಶದ ಪಂಚಾಯತ್‌ಗಳ ಸದಸ್ಯರು, ನೀರುಮಾರ್ಗ ಪಿಡಿಒ ಸುಧೀರ್, ಮಲ್ಲೂರು ಪಿಡಿಒ ರಾಜೇಂದ್ರ, ತಿರುವೈಲು ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್, ಮಲ್ಲೂರು ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್, ಅರ್ಕುಲ ಪಂಚಾಯತ್ ಅಧ್ಯಕ್ಷೆ ಝೀನತ್, ನೀರುಮಾರ್ಗ ಪಂಚಾಯತ್ ಅಧ್ಯಕ್ಷೆ ಧನವಂತಿ ಅವರು ಮಾತನಾಡಿ, ಯೋಜನೆ ಕಾರ್ಯಗತಗೊಳಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.
ಹಿರಿಯ ಇಂಜಿಯರ್‌ಗಳಾದ ಜಿ. ಕೆ. ನಾಯ್ಕ್, ನರೇಂದ್ರ, ಜಗದೀಶ್, ಗುತ್ತಿಗೆದಾರ ಮೊಗ್ರೋಡಿ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಉಳಾಯಿಬೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರೆ, ಕಿಶೋರ್ ವಂದಿಸಿದರು.