ವಾತಾವರಣವನ್ನು ವಿಷರಹಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ: ಭರತ್ ಶೆಟ್ಟಿ.
ಘನತ್ಯಾಜ್ಯ ಘಟಕ ಉದ್ಘಾಟನೆ, ವಸತಿ ಆದೇಶ ಪತ್ರ ವಿತರಣೆ
ಕೈಕಂಬ: ನಮ್ಮ ಮುಂದಿನ ಪೀಳಿಗೆ ವಿಷರಹಿತ ವಾತಾವರಣದಲ್ಲಿ ಬದುಕಬೇಕಾದರೆ ಪ್ಲಾಸ್ಟಿಕ್ ಎಂಬ ವಿಷವನ್ನು ನಮ್ಮ ಮನೆಯಿಂದ ರಸ್ತೆಗೆ ಬರದಂತೆ ನೋಡಿಕೊಳ್ಳಬೇಕಾಗಿದೆ. ಇಲ್ಲವಾದರೆ ವಾತಾವರಣವನ್ನು ವಿಷಮಯ ಮಾಡಿದ ಕಾರಣಕ್ಕೆ ಮುಂದಿನ ನಮ್ಮ ಪೀಳಿಗೆಯ ಶಾಪಕ್ಕೆ ನಾವು ಗುರಿಯಗಬೇಕಾಗುತ್ತದೆ. ನಮ್ಮ ಗ್ರಾಮವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮದಾಗಿದೆ, ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕಿಸಿ ಕೊಡುವ ಮೂಲಕ ಗ್ರಾಮ ಪಂಚಾಯತ್ ನ ಸ್ವಚ್ಛ ಗ್ರಾಮ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಸಲಹೆ ನೀಡಿದ್ದಾರೆ.

ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರ್ಕಾರಗುಡ್ಡೆ ಎಂಬಲ್ಲಿ ಅಂದಾಜು 7.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಸೋಮವಾರ ಉದ್ಘಾಟಿಸಿದ ನಂತರ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರಗಳನ್ನು ಮತ್ತು ಪ. ಜಾತಿ ಮತ್ತು ಪ. ಪಂಗಡದ ವಿದ್ಯಾರ್ಥಿಗಳಿಗೆ ಬರವಣಿಗೆಯ ಟೇಬಲ್ ಸಹಿತ ಚೆಯರ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್ ಗೆ ದೇಣಿಗೆ ರೂಪದಲ್ಲಿ ಸಹಕಾರ ನೀಡಿದ ಚಂದ್ರಶೇಖರ್ ತುಂಬೆಮಜಲ್ ಅವರನ್ನು ಶಾಸಕರು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇದೇ ವೇಳೆ ಶಾಸಕರನ್ನು ಕುಪ್ಪೆಪದವು ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರ ಪರವಾಗಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಂಬೇಡ್ಕರ್ ವಸತಿ ಯೋಜನೆಯ 26 ಫಲಾನುಭವಿಗಳಿಗೆ ವಸತಿ ಯೋಜನೆಯ ಕಾಮಗಾರಿ ಆದೇಶ ಪತ್ರಗಳನ್ನು ಶಾಸಕರು ವಿತರಿಸಿದರು.



