Published On: Thu, Sep 22nd, 2022

ಮರದ ಕೆತ್ತನೆ-ದಾರುಶಿಲ್ಪದ ಯುವ ಪ್ರತಿಭೆ ಶೈಲೇಶ್ ಆಚಾರ್ಯ

ಕೈಕಂಬ : ಕಳೆದ ೧೨ ವರ್ಷಗಳಿಂದ ಮರದ ಕಲಾಕೃತಿ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ದಾರುಶಿಲ್ಪಿ ಶೈಲೇಶ್ ಆಚಾರ್ಯ ಎಂಬ ಯುವ ಪ್ರತಿಭೆ ಇದೀಗ ಶ್ರೀ ಕ್ಷೇತ್ರ ಪೆರಾರದ ಬಂಟಕಂಬ ಮತ್ತು ರಾಜಾಂಗಣ ಜೀರ್ಣೋದ್ಧಾರದಲ್ಲಿ ಮಹಡಿಯ(ಮಾಡು) ಮರದ ಕೆತ್ತನೆ ಕೆಲಸ ನಡೆಸುತ್ತಿದ್ದು, ಮನಮೋಹಕ ಕಲಾನೈಪುಣ್ಯತೆಯಿಂದ ಸ್ಥಳೀಯವಾಗಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.

ಎಸ್ಸೆಸ್ಸೆಲ್ಸಿವರೆಗೆ ಓದಿರುವ ಪಡುಪೆರಾರ ಕಟ್ಟಿಂಜ ನಿವಾಸಿ ಶ್ಯಾಮರಾಯ ಆಚಾರ್ಯ ಮತ್ತು ಶ್ರೀಲತಾ ದಂಪತಿಯ ಮೂವರ ಮಕ್ಕಳಲ್ಲಿ ಹಿರಿಯವರಾದ ಶೈಲೇಶ್ ಬಾಲ್ಯದ ದಿನಗಳಲ್ಲೇ ದಾರುಶಿಲ್ಪದತ್ತ ಆಕರ್ಷಿತರಾಗಿದ್ದರು. ಮರದ ಕೆತ್ತನೆ ಮೇಲೆ ಅಪಾರವಾದ ಆಸಕ್ತಿ ಹೊಂದಿರುವ ಇವರು, ಮರಕ್ಕೆ ಜೀವ ತುಂಬಿಸುವ ಕಲೆಗೆ ಪೂರಕವೆನ್ನಲಾದ ವಾಸ್ತುಶಿಲ್ಪದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕುಡುಪು ಕೃಷ್ಣರಾಜ ತಂತ್ರಿ ಅವರಿಂದ ವಾಸ್ತುಶಿಲ್ಪದ ಬಗ್ಗೆ ಕಲಿತಿರುವ ಇವರು, ತನ್ನ ಇದುವರೆಗಿನ ಸಾಧನೆಯ ಹಿಂದೆ ಗುರುಗಳಾದ ಕುಡುಪು ತಂತ್ರಿಗಳು, ಮೂಡುಪೆರಾರದ ಅನಂತ ಆಚಾರ್ಯ ಮತ್ತು ಕಾಸರಗೋಡಿನ ಪುಷ್ಪರಾಜ ಆಚಾರ್ಯ ಮಾರ್ಗದರ್ಶನ ಮರೆಯಲು ಸಾಧ್ಯವಿಲ್ಲ ಎಂದು ಅತ್ಯಂತ ಭಕ್ತಿಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ.

ಗಮನೀಯ ಕೆಲಸಗಳು : ಎರಡು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿರುವ ಗುರುಪುರ ಕೈಕಂಬದ ಶ್ರೀ ಕೋರ‍್ದಬ್ಬು ದೈವಸ್ಥಾನದ ಮಹಡಿಯ ಮರದ ಕೆತ್ತನೆ ಕಲಾಕೃತಿ ನಿರ್ಮಿಸಿರುವ ಇವರು, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಹಾಗೂ ಚೇಳಾರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಪಲ್ಲಕಿ ನಿರ್ಮಿಸಿದ್ದಾರೆ. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಲಾಲಕಿ ಹಾಗೂ ಸುರತ್ಕಲ್‌ನ ಮುಂಚೂರು ಸಮೀಪದ ಚಾವಡಿಮನೆಗಾಗಿ ಮರದ ಮಹಡಿಯ ಕೆಲಸ ನಡೆಸಿದ್ದಾರೆ. ಮರದ ಕೆಲಸ ನಡೆಸಲು ಇವರು ತನ್ನ ಮನೆಯಲ್ಲಿ ಕಿರು ಕಾರ್ಯಗಾರ ಹೊಂದಿದ್ದು, ಒಂದಿಬ್ಬರು ಕೆಲಸಗಾರರು ಇವರ ಜೊತೆಗಾರರಾಗಿದ್ದಾರೆ.

ವರ್ಷಗಳ ಹಿಂದೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗಾಗಿ ಇವರು ನಿರ್ಮಿಸಿ ಕೊಟ್ಟಿರುವ ಆಕರ್ಷಕ ಸಣ್ಣ ರಥವೊಂದು ಈಗಲೂ ಅಲ್ಲಿನ ವಸ್ತು ಸಂಗ್ರಹಾಲಯದಲ್ಲಿದೆ. ಅದೇ ರೀತಿ ಈಗ ಮತ್ತೊಂದು ಸಣ್ಣ ರಥ ನಿರ್ಮಿಸುತ್ತಿದ್ದಾರೆ. ಆದರೆ ಇದು ಸ್ವಾಮಿಲಪದವು ಕುಡುಬಿ ಸಮುದಾಯದ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ಅರ್ಪಣೆಯಾಗಲಿದೆ. ದೀಪಾವಳಿ ಸಂದರ್ಭದಲ್ಲಿ ದೇವಸ್ಥಾನ ಸೇರಲಿರುವ ಈ ಸಣ್ಣ ರಥ ಹಲವು ವಿಶಿಷ್ಟ ಸೂಕ್ಷ್ಮ ಕಲಾಕೃತಿ ಒಳಗೊಂಡಿದ್ದು ಆಕರ್ಷಕವಾಗಿದೆ.

“ಮರದ ಕುಸುರಿ ಕೆಲಸದಲ್ಲಿ ಇನ್ನಷ್ಟು ಸಾಧಿಸುವ ಗುರಿ ಹೊಂದಿದ್ದೇನೆ. ಈಗಾಗಲೇ ಕೆಲವು ದೇವಸ್ಥಾನ ಹಾಗೂ ದೈವಸ್ಥಾನಗಳಿಗಾಗಿ ಕೆಲಸ ಮಾಡಿದ್ದೇನೆ. ಹೆಚ್ಚಿನ ಸಾಧನೆಗಾಗಿ ದಾರುಶಿಲ್ಪಕ್ಕೆ ಪೂರಕವೆನ್ನಲಾದ ವಾಸ್ತುಶಿಲ್ಪ ಹಾಗೂ ಸಂಸ್ಕೃತ ಅಧ್ಯಯನ ಮಾಡಬೇಕೆಂದುಕೊಂಡಿದ್ದೇನೆ” ಎಂದು ಶೈಲೇಶ್ ಆಚಾರ್ಯ ಹೇಳಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter