ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ
ನವದೆಹಲಿ: ಇನ್ನುಮುಂದೆ ಬ್ಯಾಂಕುಗಳಿಗೆ (Banks) ಸ್ಥಳೀಯ ಭಾಷೆ (Local Language) ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಕ ಮಾಡಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಲಹೆ ನೀಡಿದ್ದಾರೆ.
ಮುಂಬೈನಲ್ಲಿ (Mumbai) ನಡೆದ ಭಾರತೀಯ ಬ್ಯಾಂಕುಗಳ ಸಂಘದ (Indian Banks Association) 75ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಅಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಇದ್ದೀರೇ ಹೊರತು, ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಶಾಖಾ ಮಟ್ಟದ ಬ್ಯಾಂಕುಗಳನ್ನು ನೋಡಿದಾಗ ಕೆಲವರು ‘ಹೇ ನೀವು ಹಿಂದಿ ಮಾತನಾಡುವುದಿಲ್ಲವೇ, ನೀವೆಲ್ಲೋ ಭಾರತೀಯರಲ್ಲ ಅನ್ನಿಸುತ್ತದೆ’ ಅಂದುಕೊಳ್ಳುತ್ತಾರೆ. ಇದು ಉತ್ತಮ ವ್ಯಾವಹಾರಿಕ (Business) ಸಂಬಂಧದ ಲಕ್ಷಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದ ಸಿಬ್ಬಂದಿಯನ್ನು ಪ್ರಾದೇಶಿಕ ಶಾಖೆಗಳಿಗೆ ನೇಮಕ ಮಾಡಬಾರದು. ಹಾಗಾಗಿ ಉತ್ತಮ ಸಿಬ್ಬಂದಿ ನೇಮಕ ಮಾಡಿಕೊಳ್ಳುವಲ್ಲಿ ಹೆಚ್ಚು ಸಂವೇದನಾ ಶೀಲ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.