ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಎಲ್ಲರೂ ಕೈಜೋಡಿಸಬೇಕು : ಇನಾಯತ್ ಅಲಿ
ಕೈಕಂಬ : ಭ್ರಷ್ಟಾಚಾರ ನಿರ್ಮೂಲನೆಯ ಪಣ ತೊಟ್ಟು ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರ ಸಹಿತ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕಾರ್ಯದಲ್ಲಿ ನಿರತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಎಲ್ಲರೂ ಕೈಜೋಡಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮನವಿ ಮಾಡಿದರು.

ಗಂಜಿಮಠದಲ್ಲಿ ಸೆ.೧೧ರಂದು ನಡೆದಿದ್ದ ಇನಾಯತ್ ಅಲಿ ಅಭಿಮಾನಿ ಬಳಗ ಗುರುಪುರ ವಲಯ ಮತ್ತು ಲಯನ್ಸ್ ಕ್ಲಬ್(ರಿ) ಮುಚ್ಚೂರು ನೀರುಡೆ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಜನಸ್ನೇಹಿ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಇನಾಯತ್ ಅಲಿ ಅಭಿಮಾನಿ ಬಳಗದ ಪ್ರಮುಖರು, ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಸೆ.೧೬ರಂದು ಶುಕ್ರವಾರ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ತಾನು ರಾಜಕೀಯದಲ್ಲಿದ್ದೇನೆ ಅಂದ ಮಾತ್ರಕ್ಕೆ ಅಥವಾ ಆಕಾಂಕ್ಷಿ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದರ್ಥವಲ್ಲ. ಪಕ್ಷದಿಂದ ಯಾರಿಗೇ ಟಿಕೆಟ್ ಸಿಗಲಿ ನಾವೆಲ್ಲ ಒಗ್ಗೂಡಿ ಕೆಲಸ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅಭಿಮಾನ ಬಳಗ ಆಯೋಜಿಸಿದ್ದ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಗ್ರಾಮ ಮಟ್ಟದ ಪ್ರಮುಖರು ಹಾಗೂ ಕಾರ್ಯಕರ್ತರಿಗೆ ಅಲಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಬಳಗದ ವಲಯಾಧ್ಯಕ್ಷ ಹರಿಯಪ್ಪ ಮುತ್ತೂರು ಪ್ರಸ್ತಾವಿಕ ಮಾತನಾಡಿದರು. ಬಳಗದ ಗೌರವಾಧ್ಯಕ್ಷ ಅಕ್ಬರ್ ಬಾದ್‌ಶಹಾ ಸ್ವಾಗತಿಸಿ, ವಂದಿಸಿದರು.

