ಬಂಟ್ವಾಳ: ಬಂಟರ ಸಂಘದ ವತಿಯಿಂದ ೮೯೧ ಮಂದಿಗೆ ರೂ ೪೨ಲಕ್ಷ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ: ತಾಲ್ಲೂಕಿನ ಬಂಟರ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಸೆ.04ರಂದು ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ ಮತ್ತು ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಇದ್ದಾರೆ.
ಬಂಟ್ವಾಳ ಸಮಾಜದಲ್ಲಿ ಬಂಟರು ಮಾತ್ರವಲ್ಲದೆ ಆರ್ಥಿಕವಾಗಿ ತೀರಾ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡುವ ಮೂಲಕ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದಾಗ ಒಟ್ಟು ಸಾಮಾಜಿಕ ಪ್ರಗತಿಯಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ ಹೇಳಿದ್ದಾರೆ.
ಇಲ್ಲಿನ ಬಂಟರ ಸಂಘದ ವತಿಯಿಂದ ಮುಂಬೈ ಆಲ್ ಕಾರ್ಗೊ ಲಾಜಿಸ್ಟಿಕ್ ಸಂಸ್ಥೆ ಸಹಯೋಗದಲ್ಲಿ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಭಾನುವಾರ ನಡೆದ ಒಟ್ಟು ೮೯೧ ಮಂದಿಗೆ ರೂ ೪೨ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಓದು ಮುಗಿಸಿ ಉದ್ಯೋಗ ಸಿಕ್ಕಿದಾಗ ಇಂತಹ ನೆರವು ನೀಡುವ ಕಾಯಕ ಮುಂದುವರಿಸಬೇಕು ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ , ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಡಾ. ನೀಲರತನ್ ಶುಭ ಹಾರೈಸಿದರು.
ಇದೇ ವೇಳೆ ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಮತ್ತು ವಿಧಾನಪರಿಷತ್ ಸದಸ್ಯ ಬಿ. ಮಂಜುನಾಥ ಭಂಡಾರಿ ಅವರಿಗೆ ಸನ್ಮಾನ, ೪೦ ಮಂದಿ ವಿಕಲಚೇತನರಿಗೆ ಸಹಾಯಧನ ನೆರವು ನೀಡಲಾಯಿತು.
ಸಂಘದ ಕಾರ್ಯದರ್ಶಿ ಬದಿಗುಡ್ಡೆ ಜಗನ್ನಾಥ ಚೌಟ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕೆ., ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಭಂಡಾರಿ, ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ ಇದ್ದರು. ಕಿಶೋರ್ ಭಂಡಾರಿ ಮತ್ತು ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.