ಮಣಿಹಳ್ಳ: ಮೂರ್ತೆದಾರರ ೯ ನೇ ಶಾಖೆ ಆರಂಭ, ಸಹಕಾರಿ ಸಂಘದಿಂದ ಸ್ವಾವಲಂಬನೆ ಸಾಧ್ಯ: ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಮಣಿಹಳ್ಳದಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಭಾನುವಾರ ಆರಂಭಗೊಂಡ ೯ನೇ ಶಾಖೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.
ಬಂಟ್ವಾಳ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ಮೂರ್ತೆದಾರರ ಜೊತೆಗೆ ರೈತರು ಮತ್ತು ಮಹಿಳೆಯರಲ್ಲಿ ಸ್ವಾವಲಂಬನೆ ಮೂಡಿಸಲು ಅವಿರತ ಶ್ರಮವಹಿಸುತ್ತಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಮಣಿಹಳ್ಳದಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಭಾನುವಾರ ಆರಂಭಗೊಂಡ ೯ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೨೦೦೫ರಲ್ಲಿ ಆರಂಭಗೊAಡ ಮೂರ್ತೆದಾರರ ಸಹಕಾರಿ ಸಂಘ ೯ ಶಾಖೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಗಣಕಯಂತ್ರ ಉದ್ಘಾಟಿಸಿ ಮಾತನಾಡಿ, ಕೇವಲ ಶ್ರೀಮಂತರಿಗೆ ಮೀಸಲಾಗಿದ್ದ ಬ್ಯಾಂಕುಗಳಿಗೆ ಪರ್ಯಾಯವಾಗಿ ಸಹಕಾರಿ ಸಂಘಗಳು ಬಡ ಜನತೆಗೆ ಸಹಕಾರಿಯಾಗಿದೆ ಎಂದರು. ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸೇಫ್ ಲಾಕರ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕುಲಾಲ್ ಠೇವಣಿಪತ್ರ ಬಿಡುಗಡೆಗೊಳಿಸಿದರು. ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕಟ್ಟಡ ಮಾಲೀಕ ಜಿತೇಂದ್ರ ಸಾಲ್ಯಾನ್ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ದಿವಂಗತ ಬಾಬು ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ ಚೇಳೂರು, ಅಶೋಕ್ ಕುಮಾರ್ ಕೋಮಾಲಿ, ಕೆ.ಸುಜಾತ ಮೋಹನದಾಸ, ವಾಣಿ ವಸಂತ್, ಸಿಇಒ ಮಮತಾ ಜಿ., ಶಾಖಾಧಿಕಾರಿ ಅಕ್ಷತಾ ಚಂದ್ರಶೇಖರ್ ಇದ್ದರು. ನಿರ್ದೇಶಕ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿ, ಜಯಶಂಕರ್ ಕಾನ್ಸಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.