ರಾಷ್ಟ್ರದ ಅತ್ಯುತ್ತಮ ಉಪಕುಲಪತಿ ಗೌರವಕ್ಕೆ ಪ್ರೊ| ಪಿ.ಎಸ್.ಯಡಪಡಿತ್ತಾಯ ಪಾತ್ರ
ಮುಂಬಯಿ : ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ರಾಷ್ಟ್ರದ ೨೦೨೨ನೇ ಸಾಲಿನ ಅತ್ಯುತ್ತಮ ಉಪಕುಲಪತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಯುನಿವರ್ಸಲ್ ಮೆಂಟರ್ ಅಸೋಸಿಯೇಷನ್‌ನ ಬ್ರೈನ್ ವಂಡರ್ಸ್ ಸಹಯೋಗದಲ್ಲಿ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ದ್ವಿತೀಯ ಉನ್ನತ ಶಿಕ್ಷಣ ಆವಿಷ್ಕಾರ ಮತ್ತು ತಂತ್ರಜ್ಞಾನ ಶೃಂಗಸಭೆಯಲ್ಲಿ ಉಪಕುಲಪತಿ ಪ್ರೊ| ಯಡಪಡಿತ್ತಾಯ ಅವರಿಗೆ ಭಾರತ ದೇಶದ ಉಚ್ಛ ೫೦ ಉಪಕುಲಪತಿಗಳ ಪೈಕಿ ಪ್ರತಿಷ್ಠಿತ `೨೦೨೨ನೇ ಸಾಲಿನ ಉಪಕುಲಪತಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆಗಸ್ಟ್ ೨೭, ೨೦೨೨ ರಂದು ಅವರು ತಮ್ಮ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮತ್ತು ಕೋವಿಡ್-೧೯ ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ತೆಗೆದುಕೊಂಡ ಉಪಕ್ರಮಗಳ ಇವರ ಅನುಪಮ ಸೇವೆಯನ್ನು ಪರಿಗಣಿಸಿ ಗೌರವ ಪ್ರದಾನಿಸಲಾಗಿದೆ.
ಈ ಶುಭಾವಸರದಲ್ಲಿ ಗೌರವಕ್ಕೆ ಉತ್ತರಿಸಿದ ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಈ ರಾಷ್ಟ್ರಪ್ರಶಸ್ತಿಯ ಕೀರ್ತಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್, ಶೈಕ್ಷಣಿಕ ಪರಿಷತ್ತು, ಡೀನ್‌ಗಳು, ವಿಶ್ವವಿದ್ಯಾನಿಲಯದ ಪೀಠಾಧಿಕಾರಿಗಳು, ಎಲ್ಲಾ ಆರು ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಜನತೆಗೆ ಸಲ್ಲುತ್ತದೆ ಎಂದು ತಿಳಿಸಿ ಎಲ್ಲರಿಗೂ ಅಭಿವಂದಿಸಿದರು.
ಕರ್ನಾಟಕ ಸರ್ಕಾರದ ಕ್ರೀಡೆ, ಯುವ ಸಬಲೀಕರಣ, ರೇಷ್ಮೆ, ಯೋಜನೆ, ಅಂಕಿಅಂಶ ಖಾತೆಗಳ ಸಚಿವ ಡಾ| ಕೆ.ಸಿ.ನಾರಾಯಣ ಗೌಡ, ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಮೋಡೆಲ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ, ಗುಲಾಬಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸೇರಿದಂತೆ ಹಲವಾರು ಗಣ್ಯರು ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.