ಮಳೆಯಲ್ಲಿ ಹುಚ್ಚಾಟ – ಕಾರಿನ ಗಾಜು ಒಡೆದು ಇಬ್ಬರ ರಕ್ಷಣೆ
ಚಿಕ್ಕಮಗಳೂರು: ರಸ್ತೆ ಮೇಲೆ ಸುಮಾರು 5 ಅಡಿ ನೀರು ಹರಿಯುತ್ತಿದ್ದರೂ ಹುಚ್ಚಾಟವಾಡಿ ಜೀವಕ್ಕೆ ಎರವಲು ತಂದುಕೊಂಡ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ನೀರು ಎಲ್ಲೆಂದರಲ್ಲಿ ನುಗುತ್ತಿರುವುದರಿಂದ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿವೆ.
ಸಖರಾಯಪಟ್ಟಣದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಯ್ಯನಕೆರೆ ಸಮೀಪದ ಪಿಳ್ಳೇನಹಳ್ಳಿ ಗ್ರಾಮದಲ್ಲೂ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕಾರನ್ನು ಚಲಾಯಿಸಲು ಹೋಗಿ, ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ಕೂಡಲೇ ಕಾರನ್ನು ಜೆಸಿಬಿ ಮೂಲಕ ಮೇಲೆ ಎತ್ತುವ ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗಲಿಲ್ಲ. ಕಾರಿನ ಮುಂಭಾಗದ ಗಾಜನ್ನು ಒಡೆದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಒಂದೆಡೆ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದರೆ, ಮತ್ತೊಂದೆಡೆ ವಾಹನ ಚಾಲಕರ ಹುಚ್ಚಾಟದಿಂದ ಜೀವಕ್ಕೆ ಎರವಲು ತಂದುಕೊಳ್ಳುತ್ತಿದ್ದಾರೆ. ಹಳ್ಳಕ್ಕೆ ಉರುಳಿದ ಕಾರು ಸಖರಾಯಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಗಿರೀಶ್ ಅವರದ್ದು ಎಂಬುದು ತಿಳಿದುಬಂದಿದೆ.