ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್ ರಾಜೀನಾಮೆಗೆ ಕಾರಣ ಏನು?
ಪಾಟ್ನಾ: ಬಿಹಾರದ ರಾಜ್ಯ ರಾಜಕೀಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಬಿಜೆಪಿ ಮೈತ್ರಿಯನ್ನು ನಿತೀಶ್ ಕುಮಾರ್ ತೊರೆದಿದ್ದಾರೆ. ವಿಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಲು ನಿತೀಶ್ ಮುಂದಾಗಿದ್ದಾರೆ.

ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ಬಿಹಾರದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸುತ್ತಿದ್ದ ಸಿಎಂ ನಿತೀಶ್ ಕುಮಾರ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಿಜೆಪಿ ಜೊತೆಗಿನ ಮೈತ್ರಿಗೆ ಪೂರ್ಣ ವಿರಾಮ ಹಾಕಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್ ಸಂಪರ್ಕದಲ್ಲಿದ್ದ ನಿತೀಶ್ ಕುಮಾರ್ ಇಂದು ಬೆಳಗ್ಗೆ ಶಾಸಕರ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ಮೈತ್ರಿ ತೊರೆಯುತ್ತಿದ್ದು, ವಿಪಕ್ಷಗಳ ಜೊತೆಗೆ ಸರ್ಕಾರ ರಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಿತೀಶ್ ಕುಮಾರ್ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಲಿದ್ದಾರೆ.
ಬಿಹಾರದಲ್ಲಿ ಒಂದೊಮ್ಮೆ ಅತಿದೊಡ್ಡ ಪಕ್ಷವಾಗಿದ್ದ ಜೆಡಿಯು ಕಳೆದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ ಅಧಿಕಾರವನ್ನು ಬಳಸಿಕೊಂಡು ತಳ ಮಟ್ಟದಲ್ಲಿ ಸಂಘಟನೆ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿಯೂ ಅಧಿಕಾರ ರಚನೆ ಮಾಡುವ ಸಾಧ್ಯತೆಗಳಿವೆ. ಹೀಗೆ ಆದರೆ ಬಿಜೆಪಿ ಜೆಡಿಯು ಅನ್ನು ಓವರ್ ಟೇಕ್ ಮಾಡಲಿದೆ ಎನ್ನುವ ಭೀತಿಯೂ ನಿತೀಶ್ ಕುಮಾರ್‌ಗೆ ಕಾಡುತ್ತಿದ್ದು ಪಕ್ಷವನ್ನು ಉಳಿಸಿಕೊಳ್ಳಲು ಮೈತ್ರಿಯಿಂದ ಹೊರ ಬಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.