ಬಿ.ಸಿ.ರೋಡು: ರೋಟರಿ ಕ್ಲಬ್ ಅಧ್ಯಕ್ಷರಿಂದ ನಾಲ್ಕನೇ ಮಹಡಿ ಟೆರೇಸ್ ಕೃಷಿ, ಮಕ್ಕಳಿಗೆ ಆಕರ್ಷಣೆ
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ನಾಲ್ಕನೇ ಮಹಡಿ ಮೇಲೆ ಟೆರೇಸ್ ಕೃಷಿ ಮಾಡಿ ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಡಾ.ಗೋವರ್ಧನ ರಾವ್ ಗಮನ ಸೆಳೆದಿದ್ದಾರೆ.

ಈ ಹಿಂದೆ ಸೌದಿ ಅರೇಬಿಯಾದಲ್ಲಿ ದುಡಿದು ನಿವೃತ್ತಿಗೊಂಡ ಬಳಿಕ ಕಳೆದ ೨೦೧೯ರಲ್ಲಿ ಊರಿಗೆ ಮರಳಿ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ತನ್ನ ಮನೆ ಎದುರು ಸ್ವಂತ ಸಂಕೀರ್ಣ ನಿರ್ಮಿಸಿದ್ದರು. ಇದೀಗ ನಗರ ಪ್ರದೇಶದಲ್ಲಿಯೂ ಕಡಿಮೆ ಜಾಗದಲ್ಲಿ ಟೆರೇಸ್ ಕೃಷಿ ಮೂಲಕ ಆಕರ್ಷಕ ಹೂದೋಟ, ತರಕಾರಿ ಮತ್ತು ವಿವಿಧ ಬಗೆಯ ಹಣ್ಣಿನ ಗಿಡ ಬೆಳೆದು ಕಟ್ಟಡಕ್ಕೆ ಹೊಸ ಕಳೆ ನೀಡಿದ್ದಾರೆ.

ಆರಂಭದಲ್ಲಿ ಬೆಳಿಗ್ಗೆ ಮತ್ತು ಸಂಜೆ ನಡಿಗೆ ಜೊತೆಗೆ ನಿವೃತ್ತಿ ಜೀವನದ ಸಮಯ ಕಳೆಯುವುದಕ್ಕಾಗಿ ಟೆರೇಸ್ ಕೃಷಿ ಮಾಡಲು ಆರಂಭಿಸಿದ ಇವರು ಬಳಿಕ ಇದನ್ನು ಹೊಸ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ೪ಸಾವಿರ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಸಂಕೀರ್ಣದ ಟೆರೇಸ್ ನಲ್ಲಿ ವಿವಿಧ ಬಗೆಯ ಹೂದೋಟ ಕೈ ಬೀಸಿ ಕರೆಯುತ್ತಿದೆ. ಇನ್ನೊಂದೆಡೆ ಬೆಂಡೆ, ತೊಂಡೆ, ಹೀರೆ ಕಾಯಿ, ಸೋರೆ ಕಾಯಿ, ಬಸಳೆ, ಕುಂಬಳ, ಬದನೆ, ಅಲಸಂಡೆ ಹೀಗೆ ತರಕಾರಿಯೂ ಇದೆ. ಚಿಕ್ಕು, ಪೇರಳೆ, ಮಾವು, ಸೇಬು, ಕಲ್ಲಂಗಡಿ, ಚೆರಿ, ಸೀತಾಫಲ, ಲೊಂಬೆ, ಜಂಬು ನೇರಳೆ ಹೀಗೆ ವಿವಿಧ ತಳಿಯ ಹಣ್ಣು ಹಂಪಲು ನೋಡುಗರನ್ನು ಆಕರ್ಷಿಸುತ್ತಿದೆ.

ರಸ್ತೆ ಬದಿ ಸಿಗುವ ಸೆಗಣಿ, ಮನೆಯಲ್ಲಿ ಉಳಿದ ತರಕಾರಿ ಮತ್ತಿತರ ಹಸಿ ತ್ಯಾಜ್ಯ ಸಹಿತ ಬೆಲ್ಲ, ಹಿಂಡಿ ಕೊಳೆತ ಬಳಿಕ ಸಿದ್ಧಪಡಿಸಿದ ಸಾವಯವ ಗೊಬ್ಬರ ಮಾತ್ರ ಬಳಸುತ್ತಿದ್ದು, ನಗರ ಪರಿಸರದಲ್ಲಿ ಶುದ್ಧ ಗಾಳಿ ಮತ್ತು ಆಮ್ಲಜನಕ ಸಿಗುತ್ತದೆ. ಇಲ್ಲಿ ಸಿಗುವ ತರಕಾರಿ ಮತ್ತು ಹಣ್ಣು ಹಂಪಲು ಮಾರಾಟ ಮಾಡದೆ ಇಲ್ಲಿಗೆ ಬರುವವರಿಗೆ ಉಚಿತವಾಗಿ ನೀಡುವುದರ ಜೊತೆಗೆ ಅವರಿಗೂ ಕೃಷಿ ಮಾಹಿತಿ ನೀಡುತ್ತಿದ್ದೇನೆ. – ಡಾ.ಗೋವರ್ಧನ ರಾವ್.
ಈ ಗಿಡಗಳಿಗೆ ಭಾರೀ ಮಳೆ ಮತ್ತು ಬಿಸಿಲಿನ ತಾಪ ಕಡಿಮೆಗೊಳಿಸಲು ಮೇಲ್ಭಾಗ ನೆಟ್ ಅಳವಡಿಸಲಾಗಿದ್ದು, ಸ್ಥಳೀಯ ಶಾಲಾ ಮಕ್ಕಳು ಕೂಡಾ ಇಲ್ಲಿಗೆ ಬಂದು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.