ಬಿ.ಸಿ.ರೋಡು: ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಮಳೆಗೆ ಸೋರುತ್ತಿದೆ, ಫ್ಲಾಟ್ ಫಾರಂ ಕತ್ತಲೆ
ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಗಲು ನಿರ್ಮಿಸಿದ ಹೈಟೆಕ್ ಶೆಟ್ಟಿ ಮಳೆಗೆ ಸೋರುತ್ತಿದೆ. ಬಂಟ್ವಾಳ ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಆದರ್ಶ ಯೋಜನೆಯಡಿ ರೂ ೫.೫ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಿದ ರೈಲ್ವೆ ನಿಲ್ದಾಣ ಮಳೆಗೆ ಸೋರುತ್ತಿದೆ. ವಿದ್ಯುತ್ ಕೈಕೊಟ್ಟರೆ ಪ್ರಯಾಣಿಕರು ಕತ್ತಲೆಯಲ್ಲೇ ಕಳೆಯುವಂತಾಗಿದೆ ಎಂಬ ಆರೋಪ ಇಲ್ಲಿನ ಪ್ರಯಾಣಿಕರಿಂದ ಕೇಳಿ ಬಂದಿದೆ.
ಇಲ್ಲಿನ ಬಹು ವರ್ಷಗಳ ಬೇಡಿಕೆಯಾಗಿದ್ದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪ್ರಯಾಣಿಕರು ರೈಲ್ವೆ ಹಳಿಗೆ ಇಳಿದೇ ದಾಟವುವಂತಾಗಿದೆ. ಸುಸಜ್ಜಿತ ಶೌಚಾಲಯ ಸಹಿತ ೬೦೦ ಮೀ. ಫ್ಲಾö್ಯಟ್ ಫಾರಂ ವಿಸ್ತರಣೆಗೊಂಡಿದ್ದು, ಶೆಲ್ಟರ್ ಕೆಳಗೆ ಮಳೆಗೆ ಸರಿಯಾಗಿ ಕೂರಲು ಜಾಗವಿಲ್ಲ. ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಬರುವ ವೇಳೆ ವಿದ್ಯುತ್ ಕೈಕೊಟ್ಟರೆ ಪ್ರಯಾಣಿಕರು ರಾತ್ರಿಯಲ್ಲೆ ಬೋಗಿ ಹುಡುಕುವಂತಾಗಿದೆ. ಪ್ರತಿದಿನ ಪಡ್ಡೆ ಹುಡುಗರು ಮತ್ತು ಕಿಡಿಗೇಡಿಗಳು ರೈಲ್ವೆ ನಿಲ್ದಾಣದಲ್ಲಿ ಸುತ್ತಾಡುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ.